×
Ad

ಅರಣ್ಯಭೂಮಿ ಕಬಳಿಕೆ: ಉತ್ತರಾಖಂಡ ಸರ್ಕಾರದ ನಿರ್ಲಕ್ಷ್ಯಕ್ಕೆ ಸುಪ್ರೀಂಕೋರ್ಟ್ ಆಕ್ರೋಶ

Update: 2026-01-06 08:10 IST

ಸುಪ್ರೀಂ ಕೋರ್ಟ್ | Photo Credit : PTI

ಹೊಸದಿಲ್ಲಿ: ಉತ್ತರಾಖಂಡದ ಹೃಷಿಕೇಶದಲ್ಲಿ ರಾಜಾರೋಷವಾಗಿ ಎರಡು ದಶಕಗಳಿಂದ ಅರಣ್ಯಭೂಮಿಯನ್ನು ಕಬಳಿಸುತ್ತಿದ್ದರೂ ಅಲ್ಲಿನ ಸರ್ಕಾರ ಮೂಕಪ್ರೇಕ್ಷಕನಾಗಿ ನೋಡುತ್ತಾ ಕುಳಿತಿದೆ ಎಂದು ಸುಪ್ರೀಂಕೋರ್ಟ್ ಚಾಟಿ ಬೀಸಿದೆ.

ಗಾಂಧಿವಾದಿ ಮೀರಾ ಬೆಹನ್ ಅವರಿಗೆ ಉತ್ತರ ಪ್ರದೇಶ ಸರ್ಕಾರ 1950ರ ದಶಕದಲ್ಲಿ ಅರಣ್ಯಭೂಮಿ ಹಂಚಿಕೆ ಮಾಡಿರುವುದನ್ನು ಉಲ್ಲೇಖಿಸಿದ ಕೋರ್ಟ್, ಇದು ಕಾರ್ಯಾಂಗ ಮತ್ತು ಒತ್ತುವರಿ ದಾರರ ನಡುವಿನ ದುಷ್ಟಕೂಟವನ್ನು ಸೂಚಿಸುತ್ತದೆ ಎಂದು ಕಟುವಾಗಿ ಟೀಕಿಸಿದೆ. ಇಂಥ ಅಕ್ರಮ ನಿರ್ಮಾಣಗಳ ಬಗೆಗಿನ ವಿವರ ಸಲ್ಲಿಸುವಂತೆಯೂ ಕೋರ್ಟ್ ನಿರ್ದೇಶನ ನೀಡಿದೆ.

ಅರಣ್ಯ ಭೂಮಿ ವ್ಯಾಜ್ಯದ ಕುರಿತ ಮೇಲ್ಮನವಿ ವಿಚಾರಣೆಯ ವೇಳೆ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯ್ ಮಲ್ಯಾ ಬಗ್ಚಿ ಅವರನ್ನೊಳಗೊಂಡ ನ್ಯಾಯಪೀಠ, ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಹೇಗೆ ವ್ಯವಸ್ಥಿತವಾಗಿ ಖಾಸಗಿ ವ್ಯಕ್ತಿಗಳು ಕಬಳಿಸುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅರಣ್ಯಭೂಮಿಯನ್ನು ಕಣ್ಣೆದುರೇ ವ್ಯವಸ್ಥಿತವಾಗಿ ಕಬಳಿಸುತ್ತಿದ್ದರೂ, 2000 ದಿಂದ 2023ರ ಅವಧಿಯಲ್ಲಿ ಉತ್ತರಾಖಂಡ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳು ಮೂಕಪ್ರೇಕ್ಷಕರಾಗಿರುವುದು ಕಳವಳಕಾರಿ ಎಂದು ಅಭಿಪ್ರಾಯಪಟ್ಟಿದೆ.

ಉತ್ತರಾಖಂಡದ ಉಪ ಅಡ್ವೊಕೇಟ್ ಜನರಲ್ ಜಿತೇಂದ್ರ ಕುಮಾರ್ ಸೇಥಿ ಕೋರ್ಟ್ ಗೆ ಮಾಹಿತಿ ನೀಡಿ, ಸರ್ಕಾರ 2023ರಲ್ಲಿ ಒತ್ತುವರಿದಾರರಿಂದ 2023ರಲ್ಲಿ ಸುಮಾರು 500 ಎಕರೆ ಜಾಗವನ್ನು ಮರುಸ್ವಾಧೀನಪಡಿಸಿಕೊಂಡಿದೆ ಎಂದು ಹೇಳಿದರು. ಹೃಷಿಕೇಶದಲ್ಲಿ ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿ 50 ಎಕರೆ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಒತ್ತುವರಿ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News