ಬಿಹಾರ ವಿಧಾನಸಭಾ ಚುನಾವಣೆ| 'ಅಮಿತಾಬ್ ಬಚ್ಚನ್' ರಿಂದ 'ಸೈಫ್ ಅಲಿ ಖಾನ್' ವರೆಗೆ; ಪ್ರಭಾವಿಗಳು ಕಣದಲ್ಲಿ!
ಸಾಂದರ್ಭಿಕ ಚಿತ್ರ (Photo: PTI)
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಈ ಬಾರಿ ರಾಜಕೀಯಕ್ಕಿಂತ ಹೆಸರುಗಳಿಗಾಗಿ ಹೆಚ್ಚು ಚರ್ಚೆಯಾಗುತ್ತಿದೆ. ಅಮಿತಾಬ್ ಬಚ್ಚನ್, ಸೈಫ್ ಅಲಿ ಖಾನ್, ಅಟಲ್ ಬಿಹಾರಿ, ಮನಮೋಹನ್ ಸಿಂಗ್, ಸುಭಾಷ್ ಚಂದ್ರ ಬೋಸ್, ನಿತೀಶ್ ಕುಮಾರ್ ಹಾಗೂ ಲಾಲು ಪ್ರಸಾದ್ ಯಾದವ್ ಇವರೆಲ್ಲರ ಹೆಸರಿನ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ ಎಂದು deccanherald.com ವರದಿ ಮಾಡಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಒಟ್ಟು 2,616 ಅಭ್ಯರ್ಥಿಗಳ ಪೈಕಿ ಅನೇಕರು ದೇಶದ ಖ್ಯಾತ ನಾಯಕರು ಮತ್ತು ಸಿನಿತಾರೆಯರ ಹೆಸರಿನವರೇ. ಈ ಹೆಸರುಗಳು ಮತದಾರರಲ್ಲಿ ಕುತೂಹಲ ಮೂಡಿಸಿವೆ.
ಬಾರ್ಹ್ ಕ್ಷೇತ್ರದಲ್ಲಿ ರಾಷ್ಟ್ರೀಯ ಸನಾತನ ಪಕ್ಷದ ಪರವಾಗಿ ಅಮಿತಾಬ್ ಬಚ್ಚನ್ ಎಂಬ ಹೆಸರಿನ ಗುತ್ತಿಗೆದಾರ ಕಣಕ್ಕಿಳಿದಿದ್ದಾರೆ. 14.6 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಅವರು, ಶಾಲಾ ದಾಖಲೆಯಲ್ಲಿವ ತಪ್ಪಿನಿಂದಲೇ ಈ ಹೆಸರು ಬಂದಿತೆಂದು ತಿಳಿಸಿದ್ದಾರೆ.
“ರಾಜ್ಯದಲ್ಲಿ ಕೊಲೆಗಳು ಹೆಚ್ಚಾಗಿವೆ, ಬಡವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಬದಲಾವಣೆ ಅಗತ್ಯ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಣಿಹರಿ ಕ್ಷೇತ್ರದಲ್ಲಿ ಕೇವಲ 90 ಸಾವಿರ ರೂ. ಆಸ್ತಿ ಹೊಂದಿರುವ ಸಮಾಜ ಸೇವಕ ಸೈಫ್ ಅಲಿ ಖಾನ್, ಎನ್‌ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮರ್ಹೌರಾದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹೆಸರಿನ ಅಭ್ಯರ್ಥಿ, ರಾಷ್ಟ್ರೀಯ ಜನಸಂಭವನ ಪಕ್ಷದ ಪರವಾಗಿ ಆರ್‌ಜೆಡಿ ಅಭ್ಯರ್ಥಿ ಜಿತೇಂದ್ರ ಕುಮಾರ್ ರೈ ವಿರುದ್ಧ ಕಣಕ್ಕಿಳಿದಿದ್ದಾರೆ.
“ಈ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ. ನಾನು ಅದಕ್ಕಾಗಿ ಹೋರಾಡುತ್ತೇನೆ,” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಸಂದೇಶ್ ಕ್ಷೇತ್ರದಲ್ಲಿ ಮಾಜಿ ಸೈನಿಕ ಮನಮೋಹನ್ ಸಿಂಗ್ ರಾಷ್ಟ್ರವಾದಿ ಜನಲೋಕ ಪಕ್ಷದ ಅಭ್ಯರ್ಥಿ.
ಬೆಲ್ದೌರ್‌ನಲ್ಲಿ ಅಟಲ್ ಬಿಹಾರಿ (ವಾಜಪೇಯಿ ಹೆಸರಿನ) ಅಭ್ಯರ್ಥಿ ಗರೀಬ್ ಜನತಾ ಪಕ್ಷದ ಪರ ಸ್ಪರ್ಧಿಸುತ್ತಿದ್ದಾರೆ. ಸಿಕಂದ್ರದಲ್ಲಿ ಜನ ಸುರಾಜ್ ಪಕ್ಷ ‘ಸುಭಾಷ್ ಚಂದ್ರ ಬೋಸ್’ ಅವರನ್ನು ಕಣಕ್ಕಿಳಿಸಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವತಃ ಸ್ಪರ್ಧಿಸುತ್ತಿಲ್ಲದಿದ್ದರೂ, ಅವರ ಹೆಸರಿನ ನಾಲ್ವರು ಅಭ್ಯರ್ಥಿಗಳು ವಿಭಿನ್ನ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ. ಗುರುವಾ (ಆರ್‌ಎಲ್‌ಜೆಪಿ), ಮೊಹಾನಿಯಾ (ಅಸಂಖ್ಯ ಸಮಾಜ ಪಕ್ಷ), ಜೆಹನಾಬಾದ್ (ಭಾಗಿದಾರಿ ಪಕ್ಷ - ಪಿ) ಮತ್ತು ಬ್ರಹ್ಮಪುರ (ಸ್ವತಂತ್ರ) ಕ್ಷೇತ್ರದಲ್ಲಿ ನಿಖಿಶ್ ಕುಮಾರ್ ಹೆಸರಿನ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇವರಲ್ಲಿ ಒಬ್ಬ 'ನಿತೀಶ್' ಎಲೆಕ್ಟ್ರಿಕಲ್ ಇಂಜಿನಿಯರ್, ಮತ್ತೊಬ್ಬ 'ನಿತೀಶ್' ಮೈನಿಂಗ್ ಇಂಜಿನಿಯರ್.
ಬಿಭೂತಿಪುರ ಮತ್ತು ಮುಜಾಫರ್‌ಪುರ ಕ್ಷೇತ್ರಗಳಲ್ಲಿ ಇಬ್ಬರು ಕನ್ಹಯ್ಯಾ ಕುಮಾರ್ ಸ್ವತಂತ್ರ ಅಭ್ಯರ್ಥಿಗಳು ಇದ್ದರೆ, ಚೆನಾರಿಯಲ್ಲಿ ಲೋಹಿಯಾ ಜನತಾ ದಳದ ಹಾಗೂ ದುಮ್ರಾನ್‌ನಲ್ಲಿ ಭಾಗಿದಾರಿ ಪಕ್ಷದ ಅಭ್ಯರ್ಥಿಗಳಾಗಿ ಇಬ್ಬರು ರವಿಶಂಕರ್ ಪ್ರಸಾದ್ ಹೆಸರಿನವರಿದ್ದಾರೆ.
ಈ ಬಿಹಾರ ಚುನಾವಣೆಯ ಮತಪತ್ರ ನಿಜಕ್ಕೂ ವಿಶಿಷ್ಟವಾಗಿದೆ. ಮತಪತ್ರದಲ್ಲಿ ತಾರೆಗಳಂತೆ ಹೊಳೆಯುತ್ತಿರುವ ಹೆಸರುಗಳು ರಾಜಕೀಯ ಚರ್ಚೆಗೂ ಮೀರಿದ ಕುತೂಹಲ ಹುಟ್ಟುಹಾಕಿವೆ.