×
Ad

ಪಾನ್, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಶುಲ್ಕಗಳಿಂದ ಇಂಧನ ನಿಷೇಧದವರೆಗೆ: ಇಂದಿನಿಂದ (ಜುಲೈ 1) ದೇಶದಲ್ಲಿ ಏನೆಲ್ಲಾ ನಿಯಮಗಳು ಬದಲಾವಣೆಯಾಗಲಿದೆ?

Update: 2025-07-01 16:20 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಇಂದಿನಿಂದ ಹಣಕಾಸು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಹಲವಾರು ಮಹತ್ವದ ಬದಲಾವಣೆಗಳು ಜಾರಿಗೆ ಬಂದಿವೆ. ಕ್ರೆಡಿಟ್ ಕಾರ್ಡ್ ಶುಲ್ಕಗಳು ಮತ್ತು ಪಾನ್ ಅರ್ಜಿ ನಿಯಮಗಳಿಂದ ಹಿಡಿದು ಹೊಸ ಜಿಎಸ್‌ಟಿ ರಿಟರ್ನ್ ಸಲ್ಲಿಕೆ ಗಡುವುಗಳು,ಪರಿಷ್ಕೃತ ಬ್ಯಾಂಕ್ ಸೇವಾ ಶುಲ್ಕಗಳು ಮತ್ತು ರೈಲ್ವೆ ಪ್ರಯಾಣ ದರಗಳಲ್ಲಿ ಹೆಚ್ಚಳದವರೆಗೆ ಏನೇನು ಬದಲಾವಣೆಗಳಾಗಿವೆ ಎನ್ನುವುದರ ಅವಲೋಕನ ಇಲ್ಲಿದೆ:

ಹೊಸ ಪಾನ್ ಅರ್ಜಿಗೆ ಈಗ ಆಧಾರ್ ಕಡ್ಡಾಯ

ಜು.1ರಿಂದ ಹೊಸ ಕಾಯಂ ಖಾತೆ ಸಂಖ್ಯೆ(ಪಾನ್)ಗೆ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯವಾಗಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯು ಪಾರದರ್ಶಕತೆಯನ್ನು ಉತ್ತೇಜಿಸಲು ಮತ್ತು ಡಿಜಿಟಲ್ ಗುರುತು ಪರಿಶೀಲನೆಯನ್ನು ಬಲಗೊಳಿಸಲು ಈ ಬದಲಾವಣೆಯನ್ನು ತಂದಿದೆ. ಈವರೆಗೆ ಅರ್ಜಿದಾರರು ಇತರ ಗುರುತಿನ ದಾಖಲೆಗಳನ್ನು ಬಳಸಬಹುದಿತ್ತು. ಇನ್ನು ಮುಂದೆ ಎಲ್ಲ ಹೊಸ ಪಾನ್ ಅರ್ಜಿಗಳಿಗೆ ಆಧಾರ್ ಅಗತ್ಯವಾಗಿರುತ್ತದೆ.

ಜಿಎಸ್‌ಟಿ ರಿಟರ್ನ್‌ಗಳ ಲಾಕ್, ಗಡುವಿನ ಬಳಿಕ ರಿಟರ್ನ್ ಸಲ್ಲಿಸುವಂತಿಲ್ಲ

ಜುಲೈ 2025ರ ತೆರಿಗೆ ಅವಧಿಯಿಂದ ಜಿಎಸ್‌ಟಿ ಫೈಲಿಂಗ್ ನಿಯಮಗಳಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

1. ವ್ಯವಹಾರಗಳು ಒಮ್ಮೆ GSTR-3B ಫಾರ್ಮ್ ಸಲ್ಲಿಸಿದ ಬಳಿಕ ಅದನ್ನು ಪರಿಷ್ಕರಿಸಲು ಸಾಧ್ಯವಿಲ್ಲ. ಬಾಹ್ಯ ಪೂರೈಕೆಗಳಿಗೆ ಯಾವುದೇ ತಿದ್ದುಪಡಿಗಳನ್ನು GSTR-3B ಫಾರ್ಮ್‌ನ್ನು ಸಲ್ಲಿಸುವ ಮುನ್ನ GSTR-1A ಫಾರ್ಮನ್ನು ಬಳಸಿ ಮಾಡಬೇಕು.

2. ತೆರಿಗೆದಾರರು ತಮ್ಮ ಮೂಲ ಗಡುವು ದಿನಾಂಕಗಳಿಂದ ಮೂರು ವರ್ಷಗಳ ಬಳಿಕ ಜಿಎಸ್‌ಟಿ ರಿಟರ್ನ್‌ಗಳನ್ನು ಸಲ್ಲಿಸಲು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ. ಈ ನಿರ್ಬಂಧವು GSTR1, GSTR-3B, GSTR-4, GSTR-9 ಇತ್ಯಾದಿಗಳು ಸೇರಿದಂತೆ ಎಲ್ಲ ಮಾಸಿಕ ಮತ್ತು ವಾರ್ಷಿಕ ರಿಟರ್ನ್‌ಗಳಿಗೆ ಅನ್ವಯಿಸುತ್ತದೆ.

ರೈಲ್ವೆ ಟಿಕೆಟ್ ದರಗಳಲ್ಲಿ ಹೆಚ್ಚಳ

ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಹೆಚ್ಚಿನ ಹೊರೆಯಾಗದಂತೆ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರಗಳನ್ನು ಹೆಚ್ಚಿಸಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ ಇದು ಕಳೆದ ೧೨ ವರ್ಷಗಳಲ್ಲಿ ಕನಿಷ್ಠ ದರ ಹೆಚ್ಚಳವಾಗಿದೆ. ಮುಖ್ಯವಾಗಿ ಜು.೧ರ ಮೊದಲು ಬುಕ್ ಮಾಡಲಾಗಿರುವ ಟಿಕೆಟ್‌ಗಳಿಗೆ ಈ ಏರಿಕೆ ಅನ್ವಯಿಸುವುದಿಲ್ಲ. ಇದರ ಜೊತೆಗೆ ಇನ್ನು ಮುಂದೆ ತತ್ಕಾಲ್ ಕೋಟಾದಡಿ ಟಿಕೆಟ್‌ಗಳನ್ನು ಬುಕ್ ಮಾಡುವ ಪ್ರಯಾಣಿಕರು ರಿಸರ್ವೇಶನ್ ಸಮಯದಲ್ಲಿ ತಮ್ಮ ಆಧಾರ್ ವಿವರಗಳನ್ನು ಒದಗಿಸಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಬದಲಾವಣೆಗಳು

ಹಲವಾರು ಬ್ಯಾಂಕುಗಳು ತಮ್ಮ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಪರಿಷ್ಕರಿಸಿವೆ. ಎಸ್‌ಬಿಐ ಕನಿಷ್ಠ ಮೊತ್ತ ಬಾಕಿ(ಎಂಎಡಿ)ಯನ್ನು ಲೆಕ್ಕಾಚಾರ ಮಾಡುವ ವಿಧಾನವನ್ನು ಬದಲಿಸಿದ್ದು,ಅದು ಈಗ ಜಿಎಸ್‌ಟಿಯ ಸಂಪೂರ್ಣ ಮೊತ್ತ,ಇಎಂಐಗಳು,ಶುಲ್ಕಗಳು, ಹಣಕಾಸು ಶುಲ್ಕಗಳು,ಯಾವುದೇ ಮಿತಿಗಿಂತ ಹೆಚ್ಚಾದ ಮೊತ್ತಗಳು ಮತ್ತು ಉಳಿದಿರುವ ಬ್ಯಾಲೆನ್ಸ್‌ನ ಶೇ.೨ನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಇಲೈಟ್,ಪ್ರೈಮ್ ಮತ್ತು ಮೈಲ್ಸ್ ನಂತಹ ಪ್ರೀಮಿಯಂ ಕಾರ್ಡ್‌ಗಳ ಮೇಲಿನ ಉಚಿತ ವಿಮಾನ ಅಪಘಾತ ವಿಮೆಯನ್ನು ನಿಲ್ಲಿಸಿದೆ.

ಎಚ್‌ಡಿಎಫ್‌ಸಿ ಜು.1ರಿಂದ 10,000 ರೂ.ಗಿಂತ ಹೆಚ್ಚಿನ ಆನ್‌ಲೈನ್ ಗೇಮಿಂಗ್ ವೆಚ್ಚಗಳ ಮೇಲೆ ಶೇ.1ರಷ್ಟು ಶುಲ್ಕವನ್ನು ಜಾರಿಗೊಳಿಸಿದೆ. ಇದು 10,000 ರೂ.ಗಿಂತ ಹೆಚ್ಚಿನ ವ್ಯಾಲೆಟ್‌ಗಳಿಗೂ ಅನ್ವಯಿಸುತ್ತದೆ ಮತ್ತು ಎರಡೂ ಸಂದರ್ಭಗಳಲ್ಲಿ 4,999 ರೂ.ಗೆ ಸೀಮಿತವಾಗಿರುತ್ತದೆ. ಈ ವಹಿವಾಟುಗಳು ಇನ್ನು ಮುಂದೆ ರಿವಾರ್ಡ್ ಪಾಯಿಂಟ್‌ಗಳಿಗೆ ಅರ್ಹವಾಗಿರುವುದಿಲ್ಲ.

ಎಚ್‌ಡಿಎಫ್‌ಸಿ ಯುಟಿಲಿಟಿ ಬಿಲ್ ಪಾವತಿಗಳು,ಬಾಡಿಗೆ,ಇಂಧನ ಮತ್ತು ಶಿಕ್ಷಣ ವೆಚ್ಚಗಳ ಮೇಲೆ ಹೊಸ ಮಿತಿಗಳನ್ನೂ ಪರಿಚಯಿಸಿದೆ. ತನ್ನ ಕ್ರೆಡಿಟ್ ಕಾರ್ಡ್ ಪೋರ್ಟ್‌ಫೋಲಿಯೊದಾದ್ಯಂತ ವಿಮೆ ವಹಿವಾಟುಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳಿಗೆ ಮಿತಿಯನ್ನು ವಿಧಿಸಿದೆ.

ಅಮೆರಿಕನ್ ಎಕ್ಸ್‌ಪ್ರೆಸ ಕೂಡ ತನ್ನ ಗೋಲ್ಡ್ ಕ್ರೆಡಿಟ್ ಕಾರ್ಡ್ ಬಳಸಿ ಇಂಧನ ವಹಿವಾಟುಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವುದನ್ನು ನಿಲ್ಲಿಸಿದೆ,ಆದರೆ ಇದು ಸ್ಮಾರ್ಟ್‌ಅರ್ನ್‌ನಂತಹ ಇತರ ಕಾರ್ಡ್‌ಗಳಿಗೆ ಅನ್ವಯಿಸುವುದಿಲ್ಲ.

ಎಟಿಎಂ ಶುಲ್ಕ ಬದಲಾವಣೆ

ಐಸಿಐಸಿಐ ಬ್ಯಾಂಕ್ ತನ್ನ ಎಟಿಎಂ ಮತ್ತು ಐಎಂಪಿಎಸ್ ಶುಲ್ಕಗಳನ್ನು ಪರಿಷ್ಕರಿಸಿದೆ. ಗ್ರಾಹಕರಿಗೆ ಪ್ರತಿ ತಿಂಗಳು ಸೀಮಿತ ಉಚಿತ ಎಟಿಎಂ ವಹಿವಾಟುಗಳು ಮುಂದುವರಿಯಲಿವೆ,ಈ ಮಿತಿಯನ್ನು ಮೀರಿದ ಬಳಿಕ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳಿಗೆ ಶುಲ್ಕ ಅನ್ವಯವಾಗುತ್ತದೆ. ಅಂತರರಾಷ್ಟ್ರೀಯ ಎಟಿಎಂ ಬಳಕೆಗೂ ಕರೆನ್ಸಿ ಪರಿವರ್ತನೆ ಶುಲ್ಕದೊಂದಿಗೆ ಸ್ಥಿರ ಶುಲ್ಕಗಳು ಅನ್ವಯವಾಗುತ್ತವೆ. ಜೊತೆಗೆ ನಗದು ಠೇವಣಿ ಮತ್ತು ಹಿಂದೆಗೆಯುವಿಕೆಯು ನಿಗದಿತ ಮಾಸಿಕ ಮಿತಿಯನ್ನು ಮೀರಿದರೆ ಶುಲ್ಕವನ್ನು ವಿಧಿಸಲಾಗುತ್ತದೆ. ಐಎಂಪಿಎಸ್ ವರ್ಗಾವಣೆಗಳಿಗೆ ವಹಿವಾಟಿನ ಮೊತ್ತಕ್ಕೆ ಅನುಗುಣವಾಗಿ ಶುಲ್ಕವನ್ನು ವಿಧಿಸಲಾಗುವುದು.

ದಿಲ್ಲಿಯಲ್ಲಿ ಹಳೆಯ ವಾಹನಗಳಿಗೆ ಇಂಧನ ಮಾರಾಟ ನಿಷೇಧ

ಇಂದಿನಿಂದ (ಜುಲೈ 1) ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹಳೆಯ ವಾಹನಗಳಿಗೆ ಇಂಧನ ಮಾರಾಟ ಮಾಡುವುದರ ಮೇಲೆ ನಿಷೇಧ ಜಾರಿಗೊಳಿಸಲಾಗಿದೆ.

ಇಂತಹ ಹಳೆಯ ವಾಹನಗಳನ್ನು ಪತ್ತೆ ಹಚ್ಚಲು ದಿಲ್ಲಿ ಸರಕಾರ ಸುಮಾರು 350 ಪೆಟ್ರೋಲ್ ಪಂಪ್ ಗಳ ಬಳಿ ಸ್ವಯಂಚಾಲಿತ ಸಂಖ್ಯಾಫಲಕ ರೀಡರ್ ಕ್ಯಾಮೆರಾಗಳನ್ನು ಅಳವಡಿಸಿದೆ.

ಈ ನಿಷೇಧದ ಭಾಗವಾಗಿ, ಸಾರಿಗೆ ಇಲಾಖೆಯ ಸಿಬ್ಬಂದಿಗಳು, ದಿಲ್ಲಿ ಪೊಲೀಸರು, ಸಂಚಾರಿ ಪೊಲೀಸರು ಹಾಗೂ ದಿಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ವಿಸ್ತೃತ ಸಿಬ್ಬಂದಿಗಳ ನಿಯೋಜನೆಯ ಯೋಜನೆಯನ್ನು ದಿಲ್ಲಿ ಸಾರಿಗೆ ಇಲಾಖೆ ರೂಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News