×
Ad

ಮಧ್ಯಪ್ರದೇಶ | ಫೇಸ್‌ಬುಕ್ ನಲ್ಲಿ ಸ್ನೇಹಿತನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪತ್ನಿಯ ವಿಡಿಯೋ ನೋಡಿ ರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆಗೈದ ಪತಿ

Update: 2025-09-15 17:26 IST

PC : Indiatoday.in

ಗ್ವಾಲಿಯರ್: ಸೋಮವಾರ ಸಂಜೆ, ಫೇಸ್‌ಬುಕ್‌ನಲ್ಲಿ ಪತ್ನಿಯ ಹುಟ್ಟುಹಬ್ಬದ ಪಾರ್ಟಿ ವಿಡಿಯೋವನ್ನು ನೋಡಿದ ಬಳಿಕ ಕೋಪಗೊಂಡ ಪತಿ ಸಾರ್ವಜನಿಕವಾಗಿ ರಸ್ತೆಯಲ್ಲಿಯೇ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ.

ಆರೋಪಿಯನ್ನು ಅರವಿಂದ್ ಪರಿಹಾರ್ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಆತನ ಪತ್ನಿ ನಂದಿನಿ ಪರಿಹಾರ್ ತಮ್ಮ ಸ್ನೇಹಿತ ಅಂಕುಶ್ ಪಾಠಕ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ಪತಿ ಅರವಿಂದ್ ಪರಿಹಾರ್ ಕೋಪಗೊಳ್ಳಲು ಕಾರಣವಾಯಿತು ಎಂದು ತಿಳಿದು ಬಂದಿದೆ.

ಪೊಲೀಸ್ ವರದಿ ಪ್ರಕಾರ, ನಂದಿನಿ ಮತ್ತು ಅಂಕುಶ್ ಪಾಠಕ್ ನಡುವಿನ ಸಂಬಂಧವು ಅರವಿಂದ್ ಕೋಪಕ್ಕೆ ಕಾರಣ ಎನ್ನಲಾಗಿದೆ. ಈ ಹಿಂದೆಯೂ ಈ ಬಗ್ಗೆ ಪತಿ ಅರವಿಂದ್ ವಿರುದ್ಧ ದೂರು ನೀಡಲಾಗಿತ್ತು. ಆದರೆ ಆತ ಪತ್ನಿಗೆ ಮತ್ತೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ದಿನ, ನಂದಿನಿ ತಮ್ಮ ಆಪ್ತರೊಂದಿಗೆ ರಿಕ್ಷಾದಲ್ಲಿ ಸಾಗುತ್ತಿದ್ದಾಗ, ಅರವಿಂದ್ ಮತ್ತೊಂದು ರಿಕ್ಷಾದಿಂದ ಅವರನ್ನು ಹಿಂಬಾಲಿಸಿ, ರಸ್ತೆಯ ಮಧ್ಯದಲ್ಲಿ ಐದು ಬಾರಿ ಗುಂಡು ಹಾರಿಸಿದ್ದ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಹೀನಾ ಖಾನ್, “ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮೃತ ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ದಿಲ್ಲಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು. ಘಟನೆ ವೇಳೆ ಅವರು ತಮ್ಮ ಆಪ್ತರೊಂದಿಗೆ ಇದ್ದರು", ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News