ಪುತ್ರರಿಗಾಗಿ ಗಡ್ಕರಿಯಿಂದ ಎಥೆನಾಲ್ ಲಾಬಿ: ಕಾಂಗ್ರೆಸ್
ನಿತಿನ್ ಗಡ್ಕರಿ | PTI
ಹೊಸದಿಲ್ಲಿ,ಸೆ.4: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿರುದ್ಧ ಕಾಂಗ್ರೆಸ್ ಪಕ್ಷ ಹಿತಾಸಕ್ತಿಗಳ ಸಂಘರ್ಷದ ಆರೋಪ ಮಾಡಿದೆ.ಗಡ್ಕರಿ ಅವರ ಇಬ್ಬರು ಪುತ್ರರು ಎಥೆನಾಲ್ ಉತ್ಪಾದಿಸುವ ಕಂಪೆನಿಗಳ ಜೊತೆ ನಂಟು ಹೊಂದಿದ್ದು, ಸರಕಾರದ ನೀತಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಆದುದರಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪೆಟ್ರೋಲ್‌ನಲ್ಲಿ ಎಥೆನಾಲ್ ಬಳಕೆಗೆ ಹೆಚ್ಚಳಕ್ಕೆ ಆಕ್ರಮಣಕಾರಿಯಾದ ರೀತಿಯಲ್ಲಿ ಲಾಬಿ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಪಕ್ಷವು ಗುರುವಾರ ಆಪಾದಿಸಿದೆ.
ಈ ಆರೋಪಗಳನ್ನು ಬಿಜೆಪಿ ತಿರಸ್ಕರಿಸಿದೆ ಹಾಗೂ ಹಗರಣಗಳ ಸಾಕ್ಷ್ಯಾಧಾರಗಳು ತನ್ನ ಬಳಿಯಿರುವುದಾಗಿ ಸುಳ್ಳು ಹೇಳುವ ಆಮ್ ಆದ್ಮಿ ಪಕ್ಷದಂತೆ ಕಾಂಗ್ರೆಸ್ ವರ್ತಿಸುತ್ತಿದೆಯೆಂದು ಟೀಕಿಸಿದೆ.
ದೇಶಾದ್ಯಂತ ಶೇ.20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ-20) ಅನ್ನು ಬಿಡುಗಡೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ ಕೆಲವೇ ದಿನಗಳ ಬಳಿಕ ಕಾಂಗ್ರೆಸ್ ಈ ಆರೋಪವನ್ನು ಮಾಡಿತ್ತು. ತಮ್ಮ ವಾಹನಗಳಿಗೆ ಸೂಕ್ತವಾಗಿ ವಿನ್ಯಾಸಗೊಳಿಸಿರದ ಇಂಧನವನ್ನು ಬಳಸುವಂತೆ ಕೋಟ್ಯಂತರ ವಾಹನ ಚಾಲಕರನ್ನು ಕೇಂದ್ರ ಸರಕಾರವು ಬಲವಂತಪಡಿಸುತ್ತಿದೆಯೆಂದು ಪಿಐಎಲ್ ಅರ್ಜಿ ಆಪಾದಿಸಿತ್ತು.
ಕಾಂಗ್ರೆಸ್ ಪಕ್ಷದ ಮಾಧ್ಯಮ ಹಾಗೂ ಪ್ರಸಾರ ವಿಭಾಗದ ವರಿಷ್ಠ ಪವನ್‌ಖೇರಾ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ‘‘ ನಾ ಖಾವುಂಗಾ, ನಾ ಖಾನೆ ದೂಂಗಾ’ ಘೋಷಣೆಯ ಧ್ವಜಧಾರಿಗಳು, ವೋಟ್‌ಚೋರಿ (ಮತಗಳ್ಳತನ)ಯ ಬಳಿಕ ಪೆಟ್ರೋಲ್ ಚೋರಿಯನ್ನು ಜಾರಿಗೊಳಿಸಿದ್ದಾರೆ. ಹಣವನ್ನು ಸುಲಿಗೆ ಮಾಡಲು ಇ-20 ಅವರ ಹೊಸ ನೀತಿಯಾಗಿದೆ’’ ಎಂದು ಖೇರಾ ತಿಳಿಸಿದ್ದಾರೆ.
‘‘ಎಥೆನಾಲ್ ಮಿಶ್ರಣ ನೀತಿಯ ಬಗ್ಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 2014ರಲ್ಲಿ ಅಧಿಕಾರವಹಿಸಿಕೊಂಡಾಗಿನಿಂದ ಎಥೆನಾಲ್ ಉತ್ಪಾದನೆ ಹೆಚ್ಚಳಕ್ಕಾಗಿ ಆಕ್ರಮಣಕಾರಿಯಾಗಿ ಲಾಬಿ ಮಾಡುತ್ತಿದ್ದಾರೆ.2018ರ ಸೆಪ್ಟೆಂಬರ್‌ನಲ್ಲಿ ಗಡ್ಕರಿ ಅವರು, ದೇಶಾದ್ಯಂತ ಸರಕಾರವು ಹೊಸದಾಗಿ ಐದು ಎಥೆನಾಲ್ ಉತ್ಪಾದನಾ ಸ್ಥಾವರಗಳನ್ನು ಸ್ಥಾಪಿಸುವುದಾಗಿ ಗಡ್ಕರಿ ಹೇಳಿದ್ದಾರೆ. ಎಥೆನಾಲ್ ಅನ್ನು ಮರ ಆಧಾರಿತ ಉತ್ಪನ್ನಗಳನ್ನು ಹಾಗೂ ಬೇರ್ಪಡಿಸಲ್ಪಟ್ಟ ಮುನ್ಸಿಪಲ್ ತ್ಯಾಜ್ಯದಿಂದ ಎಥನಾಲ್ ಅನ್ನು ಉತ್ಪಾದಿಸಲಾಗುತ್ತದೆ.
‘‘ಎಥೆನಾಲ್ ಮಿಶ್ರಣದಿಂದಾಗಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 50 ರೂ. ಆಗಲಿದೆ ಹಾಗೂ ಪ್ರತಿ ಲೀಟರ್ ಪೆಟ್ರೋಲ್‌ಗೆ 55 ರೂ. ಆಗಲಿದೆ ಎಂದು ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ. ಆದರೆ ಇದೊಂದು ದೊಡ್ಡ ಬೋಗಸ್ ಆಗಿದೆ ಎಂದು ಖೇರಾ ಆಪಾದಿಸಿದ್ದಾರೆ. ಇ-20 ಎಥೆನಾಲ್ ಗೆ ಉತ್ತೇಜನ ಸಾರ್ವಜನಿಕ ನೀತಿಯೇ ಅಥವಾ ಗಡ್ಕರಿ ಪುತ್ರರು ಹಾಗೂ ಅವರ ಕಂಪೆನಿಗಳಿಗೆ ದಿಢೀರ್ ಲಾಭ ಮಾಡಿಕೊಡುವುದಾಗಿಯೇ? ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಶೂನ್ಯಸಹನೆಯ ಶಪಥ ಮಾಡಿದ್ದಾರೆ. ಸಂವಿಧಾನದ 130ನೇ ತಿದ್ದುಪಡಿ ಅಂಗೀಕಾರಗೊಳ್ಳುವ ಮುನ್ನ ಗಡ್ಕರಿ ಹಾಗೂ ಅವರ ಪುತ್ರರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಲೋಕಪಾಲ್ ಗೆ ಧೈರ್ಯವಿದೆಯೇ? ಎಂದು ಖೇರಾ ಪ್ರಶ್ನಿಸಿದ್ದಾರೆ.
ನಿತಿನ್ ಗಡ್ಕರಿ ಅವರ ಪುತ್ರ ನಿಖಿಲ್ ಗಡ್ಕರಿ, ಸಿಯಾನ್ ಆ್ಯಗ್ರೋ ಇಂಡಸ್ಟ್ರೀಸ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಒಡೆತನವನ್ನು ಹೊಂದಿದ್ದರೆ, ಅವರ ಇನ್ನೊಬ್ಬ ಪುತ್ರ ಸಾರಂಗ್ ಗಡ್ಕರಿ ಮಾನಸ್ ಆ್ಯಗ್ರೋ ಇಂಡಸ್ಟ್ರೀಸ್ ನ ನಿರ್ದೇಶಕ. ಇವೆರಡೂ ಸಂಸ್ಥೆಗಳು ಎಥೆನಾಲ್ ಅನ್ನು ಉತ್ಪಾದಿಸುತ್ತವೆ. ಸಿಯಾನ್ ಆ್ಯಗ್ರೋದ ಆದಾಯವು 2024ರ ಜೂನ್ ನಲ್ಲಿ 18 ಕೋಟಿ ರೂ. ಇದ್ದುದು, 2025ರಲ್ಲಿ 523 ಕೋಟಿ ರೂ. ಆಗಿದೆ. ಅದರ ಶೇರುದರ 2025ರ ಜನವರಿಯಲ್ಲಿ 37.45 ರೂ. ಇದ್ದುದು, 2025ರ ಆಗಸ್ಟ್ ನಲ್ಲಿ 638 ರೂ. ಆಗಿದೆ. ಶ್ರೀಸಾಮಾನ್ಯನ ವೇತನವು ನಿಂತಲ್ಲೇ ಇದೆ ಇಲ್ಲವೇ ಕುಸಿಯುತ್ತಿದೆ. ಆದರೆ ಸಿಯಾನ್ ಆ್ಯಗ್ರೊದ ಆರ್ಥಿಕತೆಯು ದಿಗ್ಭ್ರಮೆಗೊಳಿಸುವ ಹಾಗೆ ಏರುಗತಿಯಲ್ಲಿ ಸಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.