ಉತ್ತರ ಪ್ರದೇಶ| ಮನೆಮನೆಗೆ ತೆರಳಿ ಖಡ್ಗ ವಿತರಣೆ: ಹಿಂದೂ ರಕ್ಷಾ ದಳದ 6 ಕಾರ್ಯಕರ್ತರ ಬಂಧನ
Screengrab:X/@zoo_bear
ಗಾಝಿಯಾಬಾದ್: ಶಾಲಿಮಾರ್ ಗಾರ್ಡನ್ ಕಾಲನಿಯಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಖಡ್ಗಗಳನ್ನು ವಿತರಿಸಿದ್ದ ಆರೋಪದಲ್ಲಿ ಹಿಂದೂ ರಕ್ಷಾ ದಳದ ಆರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಹಿಂದೂ ರಕ್ಷಾ ದಳದ ಅಧ್ಯಕ್ಷ ಭೂಪೇಂದ್ರ ಚೌಧರಿ ಕೂಡ ಆರೋಪಿಯಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿದ ಟ್ರಾನ್ಸ್ ಹಿಂಡನ್ ವಿಭಾಗದ ಉಪ ಪೊಲೀಸ್ ಆಯುಕ್ತ(ಡಿಸಿಪಿ) ನಿಮಿಷ್ ಪಾಟೀಲ್, ಹಿಂದೂ ರಕ್ಷಾ ದಳದ ಎರಡು ಡಜನ್‌ಗಿಂತ ಹೆಚ್ಚು ಗುರುತಿಸಲಾಗದ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಭಾರತೀಯ ನ್ಯಾಯ ಸಂಹಿತೆಯ 191(2), 191(3) ಹಾಗೂ 127(2) ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾಲೋನಿಯಲ್ಲಿ ಮೆರವಣಿಗೆ ನಡೆಸಿದ ಗುಂಪಿನ ಸದಸ್ಯರ ಅಡಗುತಾಣಗಳ ಮೇಲೆ ಪೊಲೀಸ್ ತಂಡಗಳು ದಾಳಿ ನಡೆಸುತ್ತಿವೆ. ಹಿಂದೂ ಪರ ಮತ್ತು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಅವರು ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಶಸ್ತ್ರಾಸ್ತ್ರಗಳನ್ನು ವಿತರಿಸಿದ್ದಾರೆ ಎಂದು ವರದಿಯಾಗಿದೆ.
"ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಕದಡಲು ಯಾವುದೇ ಸಂಘಟನೆಗೆ ಪೊಲೀಸರು ಅವಕಾಶ ನೀಡುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಹೆಸರಿಸಿದ ಮತ್ತು ಹೆಸರಿಸಲಾಗದ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ನಿಮಿಷ್ ಪಾಟೀಲ್ ಹೇಳಿದ್ದಾರೆ.
ಹಿಂದೂ ರಕ್ಷಾ ದಳದ ಅಧ್ಯಕ್ಷ ಭೂಪೇಂದ್ರ ಚೌಧರಿ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ಆತ “ಹಿಂದೂ ಕುಟುಂಬಗಳ ಮೇಲೆ ದಾಳಿ ಮಾಡುವ ಮತ್ತು ಹಿಂದೂ ಯುವತಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುವ ಮುಸ್ಲಿಮರನ್ನು ಎದುರಿಸಲು 250 ಶಸ್ತ್ರಾಸ್ತ್ರಗಳನ್ನು ವಿತರಿಸಲಾಗಿದೆ” ಎಂದು ಹೇಳಿದ್ದಾನೆ.
“ಮುಸ್ಲಿಮರ ವಿರುದ್ಧ ಹೋರಾಡಲು ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಹೊಂದಿರಬೇಕು. ಹಿಂದೂ ರಕ್ಷಾ ದಳವು ಹಿಂದೂ ಸಮುದಾಯಕ್ಕೆ ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ತುಂಬಾ ಶೋಚನೀಯವಾಗಿದೆ. ಅಲ್ಲಿ ಹಿಂದೂಗಳನ್ನು ಹತ್ಯೆ ಮಾಡಲಾಗುತ್ತಿದೆ. ಬಾಂಗ್ಲಾದೇಶದಂತೆ ಹಿಂದೂಗಳ ಸ್ಥಿತಿಯಂತೆ ಇಲ್ಲಿನ ಹಿಂದೂಗಳ ಸ್ಥಿತಿಯಾಗಲು ನಾವು ಬಿಡುವುದಿಲ್ಲ" ಎಂದು ಭೂಪೇಂದ್ರ ವೀಡಿಯೊದಲ್ಲಿ ಹೇಳಿದ್ದಾನೆ.
In Ghaziabad today, members of an organisation called Hindu Raksha Dal were seen distributing swords and other sharp weapons. They first set up a stall for this purpose and later moved around the locality handing out weapons, claiming it was to prevent a situation like the… pic.twitter.com/XS81JYwPrd
— Mohammed Zubair (@zoo_bear) December 29, 2025