ಭಾರತೀಯರ ಉದ್ಯೋಗ ಪರ್ಮಿಟ್ ರದ್ದತಿಗೆ ಬಾಂಗ್ಲಾ ಸಂಘಟನೆ ಪಟ್ಟು
PC: x.com/IndiaToday
ಹೊಸದಿಲ್ಲಿ: ಸಂಘರ್ಷಪೀಡಿತ ದೇಶದಲ್ಲಿ ಭಾರತೀಯರಿಗೆ ನೀಡಿರುವ ಉದ್ಯೋಗ ಪರ್ಮಿಟ್ ಗಳನ್ನು ತಕ್ಷಣ ರದ್ದುಪಡಿಸುವಂತೆ ಬಾಂಗ್ಲಾದೇಶದ ಕ್ರಾಂತಿಕಾರಿ ಸಂಘಟನೆ ಇಂಕ್ವಿಲಾಬ್ ಮಂಚ್ ಅಲ್ಲಿನ ಮಧ್ಯಂತರ ಸರ್ಕಾರವನ್ನು ಆಗ್ರಹಿಸಿದೆ.
ಇತ್ತೀಚೆಗೆ ಗುಂಡೇಟಿನಿಂದ ಮೃತಪಟ್ಟ ಯುವ ಮುಖಂಡ ಷರೀಫ್ ಉಸ್ಮಾನ್ ಬಿನ್ ಹಾದಿ (32) ಹುಟ್ಟುಹಾಕಿದ ಸಂಘಟನೆ ಇದಾಗಿದೆ. ಆದರೆ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಸಂಘಟನೆ ಮೌನವಾಗಿದೆ.
ವಿಚಿತ್ರವೆಂದರೆ ಅಮೆರಿಕದಿಂದ ಮರಳಿರುವ ಮುಹಮ್ಮದ್ ಯೂನುಸ್ ಅವರ ಮಧ್ಯಂತರ ಸರ್ಕಾರ ಭಾರತವನ್ನು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಕಟಕಟೆಗೆ ಎಳೆಯಬೇಕು ಎಂದು ಒತ್ತಾಯಿಸಿದೆ.
2026ರ ಫೆಬ್ರವರಿಯಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅರಾಜಕತೆಯತ್ತ ದೇಶ ಮುಖ ಮಾಡಿರುವ ನಡುವೆಯೇ ಸಂಘಟನೆ ಈ ಆಗ್ರಹ ಮುಂದಿಟ್ಟಿದೆ.
ಬಾಂಗ್ಲಾದೇಶದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ತೀವ್ರ ಅಸಹಿಷ್ಣುತೆ ಬೆಳೆಯುತ್ತಿರುವ ಬಗ್ಗೆ ವಿಶ್ಲೇಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಇಂಥ ಕ್ರಾಂತಿಕಾರಿ ಗುಂಪುಗಳು ಚುನಾವಣೆಗೆ ಮುನ್ನ ಸುಲಲಿತ ಅಧಿಕಾರ ಚಲಾಯಿಸುವ ಪ್ರಯತ್ನವನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಘಟನೆಯ ಈ ಒತ್ತಾಯದ ಬಗ್ಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.