×
Ad

200 ಕೆಜಿ ಗಾಂಜಾವನ್ನು ಇಲಿಗಳು ನಾಶಪಡಿಸಿದೆ ಎಂದ ಜಾರ್ಖಂಡ್ ಪೊಲೀಸರು!

ಆಘಾತ ವ್ಯಕ್ತಪಡಿಸಿ ಮಾದಕವಸ್ತು ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Update: 2025-12-30 12:59 IST

ಸಾಂದರ್ಭಿಕ ಚಿತ್ರ (AI)

ರಾಂಚಿ: ಪೊಲೀಸ್ ಕಸ್ಟಡಿಯಲ್ಲಿ ಸಂಗ್ರಹಿಸಿಟ್ಟಿದ್ದ 1 ಕೋಟಿ ರೂ. ಮೌಲ್ಯದ 200 ಕಿಲೋಗ್ರಾಂಗಳಷ್ಟು ಗಾಂಜಾವನ್ನು ಇಲಿಗಳು ನಾಶಪಡಿಸಿದೆ ಎಂದು ಪೊಲೀಸರು ತಿಳಿಸಿದ ಬೆನ್ನಲ್ಲೆ ಆಘಾತ ವ್ಯಕ್ತಪಡಿಸಿದ ರಾಂಚಿ ನ್ಯಾಯಾಲಯ ಹೈಪ್ರೊಫೈಲ್ ಮಾದಕವಸ್ತು ಪ್ರಕರಣದ ಪ್ರಮುಖ ಆರೋಪಿಯನ್ನೇ ಖುಲಾಸೆಗೊಳಿಸಿದೆ.

ಜನವರಿ 2022ರಲ್ಲಿ ವಾಹನ ತಪಾಸಣೆಯ ಸಮಯದಲ್ಲಿ ಓರ್ಮಾಂಜಿ ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡಿದ್ದರು. ರಾಂಚಿಯಿಂದ ರಾಮಗಢ ಕಡೆಗೆ ದೊಡ್ಡ ಪ್ರಮಾಣದಲ್ಲಿ ಬಿಳಿ ಬೊಲೆರೊದಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮೂವರು ವ್ಯಕ್ತಿಗಳು ಪರಾರಿಯಾಗಲು ಪ್ರಯತ್ನಿಸಿದರು. ಬಿಹಾರದ ವೈಶಾಲಿ ಜಿಲ್ಲೆಯ ಬಿರ್ಪುರ್ ಗ್ರಾಮದ ನಿವಾಸಿ ಇಂದ್ರಜಿತ್ ರೈ (26) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆನಂತರ ವಾಹನದ ಶೋಧದ ವೇಳೆ ಸುಮಾರು 200 ಕೆಜಿ ಗಾಂಜಾ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಇಂದ್ರಜಿತ್ ರೈಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಆತನ ವಿರುದ್ಧ NDPS ಕಾಯ್ದೆಯ ಕಠಿಣ ನಿಬಂಧನೆಗಳಡಿ ಪ್ರಕರಣ ದಾಖಲಿಸಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಆದರೆ, ವಿಚಾರಣೆ ಮುಂದುವರೆದಂತೆ, ಪ್ರಾಸಿಕ್ಯೂಷನ್ ಪ್ರಕರಣವನ್ನು ಸಾಬೀತುಪಡಿಸಲು ವಿಫಲವಾಯಿತು. ಗಾಂಜಾ ವಶಪಡಿಸಿಕೊಂಡ ಸಮಯ, ಸ್ಥಳ ಮತ್ತು ವಿಧಾನದ ಬಗ್ಗೆ ಸರಿಯಾದ ಸಾಕ್ಷ್ಯಗಳು ಇರಲಿಲ್ಲ. ಆಘಾತಕಾರಿಯಾಗಿ, ವಾಹನವನ್ನು ಎಲ್ಲಿ ತಡೆಹಿಡಿಯಲಾಯಿತು ಅಥವಾ ಶೋಧ ಕಾರ್ಯಾಚರಣೆ ಎಷ್ಟು ಸಮಯದವರೆಗೆ ನಡೆಯಿತು ಎಂಬುದನ್ನು ಯಾವುದೇ ಸಾಕ್ಷಿಗಳು ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗಲಿಲ್ಲ.

ಒರ್ಮಾಂಜಿ ಪೊಲೀಸ್ ಠಾಣೆಯ ಮಲ್ಖಾನಾದಲ್ಲಿ ಸಂಗ್ರಹಿಸಲಾಗಿದ್ದ ವಶಪಡಿಸಿಕೊಂಡ ಗಾಂಜಾವನ್ನು ಇಲಿಗಳು ನಾಶಪಡಿಸಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದಾಗ ಪ್ರಾಸಿಕ್ಯೂಷನ್‌ಗೆ ದೊಡ್ಡ ಹಿನ್ನಡೆಯಾಯಿತು. ಈ ವಿವರಣೆಯನ್ನು "ತೀವ್ರ ನಿರ್ಲಕ್ಷ್ಯದ" ಪ್ರಕರಣ ಎಂದು ಕರೆದ ನ್ಯಾಯಾಲಯ, ವಶಪಡಿಸಿಕೊಂಡ ವಸ್ತುಗಳನ್ನು ರಕ್ಷಿಸುವಲ್ಲಿ ಪೊಲೀಸರು ವಿಫಲರಾದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತು.

ಆರೋಪಿ ಮತ್ತು ವಶಪಡಿಸಿಕೊಂಡ ವಾಹನದ ನಡುವೆ ವಿಶ್ವಾಸಾರ್ಹ ನಂಟನ್ನು ಸ್ಥಾಪಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಇದರಿಂದಾಗಿ ಯಾವುದೇ ಪುರಾವೆಗಳು ಉಳಿದಿಲ್ಲ. ಆದ್ದರಿಂದ ʼಅನುಮಾನʼದ ಲಾಭ ಆರೋಪಿಗೆ ಹೋಗಬೇಕು ಎಂದ ನ್ಯಾಯಾಲಯ, ಇಂದ್ರಜಿತ್ ರೈ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ.

ಈ ಪ್ರಕರಣವು ಕಾನೂನು ಜಾರಿ ಸಂಸ್ಥೆಗಳು ವಶಪಡಿಸಿಕೊಂಡ ಹೆಚ್ಚಿನ ಮೌಲ್ಯದ ಮಾದಕ ವಸ್ತುಗಳನ್ನು ಹೇಗೆ ಸಂಗ್ರಹಿಸುತ್ತವೆ ಮತ್ತು ರಕ್ಷಿಸುತ್ತವೆ ಎಂಬುದರ ಬಗ್ಗೆ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ. ರೈಲ್ವೆ ರಕ್ಷಣಾ ಪಡೆ (RPF) ಪ್ರಕಾರ, ಪ್ರತಿ ಕಿಲೋಗ್ರಾಂಗೆ ಸರಿಸುಮಾರು 50,000 ರೂ. ಮೌಲ್ಯವಿದ್ದು, ವಶಪಡಿಸಿಕೊಂಡ ಗಾಂಜಾದ ಒಟ್ಟು ಮೌಲ್ಯ 1 ಕೋಟಿ ರೂ.ಗಳಷ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News