Mumbai| ಮತ್ತೊಂದು 'ಬೆಸ್ಟ್' ಬಸ್ ದುರಂತ: ನಾಲ್ವರು ಪಾದಚಾರಿಗಳು ಮೃತ್ಯು, 14 ಮಂದಿಗೆ ಗಾಯ
PC: x.com/NH_India
ಮುಂಬೈ: ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ಪೋರ್ಟ್ (ಬೆಸ್ಟ್) ಇಲಾಖೆಗೆ ಸೇರಿದ ಎಲೆಕ್ಟ್ರಿಕ್ ಬಸ್ ಯು-ಟರ್ನ್ ತೆಗೆದುಕೊಳ್ಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆ ಹರಿದು ಸಂಭವಿಸಿದ ದುರಂತದಲ್ಲಿ ನಾಲ್ವರು ಮೃತಪಟ್ಟು, ಇತರ 14 ಮಂದಿ ಗಾಯಗೊಂಡಿದ್ದಾರೆ. ಭಂಡೂಪ್ (ಪಶ್ಚಿಮ) ರೈಲ್ವೆ ಸ್ಟೇಷನ್ ಬಳಿ ಸೋಮವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಒಂದು ವರ್ಷದ ಹಿಂದೆ ಕುರ್ಲಾದಲ್ಲಿ ನಡೆದ ಇಂಥದ್ದೇ ದುರಂತದಲ್ಲಿ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದರು.
ರೂಟ್ ನಂ. 606ರಲ್ಲಿ ಚಲಿಸುತ್ತಿದ್ದ ಬಸ್ ರಾತ್ರಿ 10.05 ರ ವೇಳೆಗೆ ರಸ್ತೆ ಬದಿಯ ಕಂಬಕ್ಕೆ ಢಿಕ್ಕಿ ಹೊಡೆದು ಫುಟ್ಪಾತ್ ಮೇಲೇರಿ, ನಿಲ್ದಾಣದ ಹೊರಗೆ ನಿಂತಿದ್ದವರ ಮೇಲೆ ಹರಿದಿದೆ. ಅಪಘಾತಕ್ಕೆ ಕಾರಣವಾದ ಬಸ್ಸು ವಿಖ್ರೋಲಿ ಡಿಪೋಗೆ ಸೇರಿದ ವೆಟ್-ಲೀಸ್ ಎಲೆಕ್ಟ್ರಿಕ್ ಎಸಿ ಬಸ್ ಆಗಿದ್ದು, ಚಾಲಕನನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.
ನಿರ್ಲಕ್ಷ್ಯ ಮತ್ತು ರಭಸದ ಚಾಲನೆಯ ಆರೋಪದಲ್ಲಿ ಸಂತೋಷ್ ರಮೇಶ್ ಸಾವಂತ್ (52) ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಚಾಲಕನನ್ನು ಅಮಾನತುಗೊಳಿಸಿ, ಆರಂಭಿಕ ತನಿಖೆ ನಡೆಸಲಾಗುತ್ತಿದೆ ಎಂದು ಬೆಸ್ಟ್ ಅಧಿಕಾರಿಗಳು ಹೇಳಿದ್ದಾರೆ.
ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಸೇರಿದ್ದು, ಸಿಯಾನ್ ಆಸ್ಪತ್ರೆಯ ನರ್ಸ್ ಮಾನಸಿ ಗುರವ್ (45), ನಟಿ ಪ್ರಣೀತಾ ರಾಸಮ್ (31) ಮತ್ತು ವರ್ಷಾ ಸಾವಂತ್ (25) ಎಂದು ಗುರುತಿಸಲಾಗಿದೆ. ಸಂಚಾರ ಇಲಾಖೆ ಉದ್ಯೋಗಿ ಪ್ರಶಾಂತ್ ಶಿಂಧೆ ಕೂಡಾ ಮೃತಪಟ್ಟವರಲ್ಲಿ ಸೇರಿದ್ದಾರೆ.