×
Ad

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಝಿಯಾ ನಿಧನ; ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ

Update: 2025-12-30 14:06 IST

Photo credit:X/@narendramodi

ಹೊಸ ದಿಲ್ಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಬಾಂಗ್ಲಾ ಅಭಿವೃದ್ಧಿ ಮತ್ತು ಭಾರತ-ಬಾಂಗ್ಲಾದೇಶ ಸಂಬಂಧಗಳಿಗೆ ಅವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯ” ಎಂದು ಹೇಳಿದ್ದಾರೆ.

“ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಿಎನ್ಪಿ ಅಧ್ಯಕ್ಷೆ ಬೇಗಂ ಖಾಲಿದಾ ಝಿಯಾರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅವರ ಕುಟುಂಬ ಹಾಗೂ ಬಾಂಗ್ಲಾದೇಶದ ಎಲ್ಲ ಜನರಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿ ನೀಡಲಿ. 2015ರಲ್ಲಿ ಢಾಕಾದಲ್ಲಿ ಅವರೊಂದಿಗೆ ನಡೆದಿದ್ದ ನನ್ನ ಆತ್ಮೀಯ ಭೇಟಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರ ದೂರದೃಷ್ಟಿ ಮತ್ತು ಪರಂಪರೆ ಉಭಯ ದೇಶಗಳಿಗೆ ಮಾರ್ಗದರ್ಶನವಾಗಲಿದೆ ಎಂದು ನಾವು ಭಾವಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ” ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಖಾಲಿದಾ ಝಿಯಾರ ನಿಧನಕ್ಕೆ ಅಮೆರಿಕ ಕೂಡಾ ಸಂತಾಪ ಸೂಚಿಸಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಾಂಗ್ಲಾದೇಶದಲ್ಲಿರುವ ಅಮೆರಿಕ ರಾಯಭಾರ ಕಚೇರಿ, “ಖಾಲಿದಾ ಝಿಯಾ ತಮ್ಮ ದೇಶದ ಆಧುನಿಕ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವವು ಬಾಂಗ್ಲಾದೇಶದ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಬರೆದುಕೊಂಡಿದೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡಾ ಸಂತಾಪ ವ್ಯಕ್ತಪಡಿಸಿದ್ದು, “ಬೇಗಂ ಖಾಲಿದಾ ಝಿಯಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಬೇಗಂ ಜಿಯಾ ಪಾಕಿಸ್ತಾನದ ಉತ್ತಮ ಸ್ನೇಹಿತೆಯಾಗಿದ್ದರು. ಈ ದುಃಖದ ಕ್ಷಣದಲ್ಲಿ ನನ್ನ ಸರಕಾರ ಮತ್ತು ಪಾಕಿಸ್ತಾನದ ಜನತೆ ಬಾಂಗ್ಲಾದೇಶದ ಜನತೆಯೊಂದಿಗೆ ನಿಲ್ಲುತ್ತೇವೆ.” ಎಂದು ಹೇಳಿದ್ದಾರೆ.

ಖಾಲಿದಾ ಝಿಯಾರ ನಿಧನಕ್ಕೆ ಜರ್ಮನಿ ಕೂಡಾ ಸಂತಾಪ ವ್ಯಕ್ತಪಡಿಸಿದ್ದು, “ಉಭಯ ದೇಶಗಳ ನಡುವಿನ ಶಾಶ್ವತ ಸ್ನೇಹಕ್ಕೆ ಜರ್ಮನಿ ಬದ್ಧವಾಗಿದೆ” ಎಂದು ಭರವಸೆ ನೀಡಿದೆ.

ಈ ನಡುವೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಿಎನ್ಪಿ ಪಕ್ಷದ ಅಧ್ಯಕ್ಷೆ ಜಿಯಾ ಖಾಲಿದಾ ನಿಧನರಾಗಿರುವ ಹಿನ್ನೆಲೆಯಲ್ಲಿ ಪಕ್ಷವು ಮಂಗಳವಾರ ಏಳು ದಿನಗಳ ಶೋಕಾಚರಣೆ ಘೋಷಿಸಿದೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖಾಲಿದಾ ಝಿಯಾ ಮಂಗಳವಾರ ನಿಧನರಾಗಿದ್ದಾರೆ. ಅವರಿಗ 80 ವರ್ಷ ವಯಸ್ಸಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News