Uttar Pradesh | ಕೆಫೆಯಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದವರ ಮೇಲೆ ಹಲ್ಲೆ; ಐದು ಮಂದಿಯ ಬಂಧನ
PC: x.com/Delhiite
ಲಕ್ನೋ: ಕೆಫೆಯೊಂದಕ್ಕೆ ನುಗ್ಗಿ, ಯುವತಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸ್ನೇಹಿತರ ಗುಂಪು ಮತ್ತು ಕೆಫೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಹಲ್ಲೆ ನಡೆಸಿದ ನಡೆಸಿದ ಸುಮಾರು 25 ಮಂದಿಯ ತಂಡದ ಪೈಕಿ ಐದು ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿರುವುದು ದಾಳಿಗೆ ಕಾರಣ ಎಂದು ತಿಳಿದು ಬಂದಿದೆ. ದಾಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ರಿಷಭ್ ಠಾಕೂರ್ ಮತ್ತು ದೀಪಕ್ ಪಾಠಕ್ ಬಂಧಿತರಲ್ಲಿ ಸೇರಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದಾಳಿಕೋರರು ಕೆಫೆಯನ್ನು ಧ್ವಂಸಗೊಳಿಸಿದ್ದು, ಘಟನೆಯ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೀಪಕ್ ಹಾಗೂ ರಿಷಭ್ ಸೇರಿದಂತೆ 25 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಮುಖ ಆರೋಪಿಗಳಿಬ್ಬರು ಸ್ಥಳೀಯರಾಗಿದ್ದು, ಬಜರಂಗದಳ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಆದರೆ ಬರೇಲಿ ಸಂಚಾಲಕ ಆರ್ಯನ್ ಚೌಧರಿ ಸ್ಪಷ್ಟನೆ ನೀಡಿ ಈ ಆರೋಪಿಗಳಿಗೂ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಕೆಫೆ ಮಾಲೀಕ ಶೈಲೇಂದ್ರ ಗಂಗ್ವಾರ್ ಮತ್ತು ಇಬ್ಬರು ಮುಸ್ಲಿಂ ಯವಕರಾದ ಶಾನ್ ಹಾಗೂ ವಕೀಫ್ ಅವರನ್ನು ಕೂಡಾ ಶಾಂತಿಗೆ ಭಂಗ ತಂದ ಆರೋಪದಲ್ಲಿ ಬಂಧಿಸಲಾಗಿದೆ. ವೈಯಕ್ತಿಕ ಬಾಂಡ್ ನೀಡಿದ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ವಕೀಫ್ ಹಾಗೂ ಶಾನ್ ಬರ್ತ್ ಡೇ ಪಾರ್ಟಿಗೆ ಕೆಫೆ ಕಾಯ್ದಿರಿಸಿದ್ದರು ಎಂದು ಠಾಣಾಧಿಕಾರಿ ರಾಜ್ ಬಾಲಿ ಸಿಂಗ್ ಹೇಳಿದ್ದಾರೆ. ರಿಷಭ್ ಹಾಗೂ ದೀಪಕ್ ಸ್ವಘೋಷಿತ ಗೋ ರಕ್ಷಕರಾಗಿದ್ದು, ಈ ಹಿಂದೆ ಕೂಡಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.