ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಗೂಗಲ್ ಸಿಇಒ ಪಿಚೈ
ಗೂಗಲ್‌ನ ವಿಶಾಖಪಟ್ಟಣಮ್ ಎಐ ಕೇಂದ್ರದ ಬಗ್ಗೆ ಮಾಹಿತಿ
ಸುಂದರ್ ಪಿಚೈ , ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ: ಗೂಗಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಆಂಧ್ರಪ್ರದೇಶದ ವಿಶಾಖಪಟ್ಟಣಮ್‌ನಲ್ಲಿ ಸ್ಥಾಪನೆಯಾಗುವ ಗೂಗಲ್‌ನ ಮೊಟ್ಟಮೊದಲ ಎಐ (ಕೃತಕ ಬುದ್ಧಿಮತ್ತೆ) ಕೇಂದ್ರದ ಯೋಜನೆಯ ಕುರಿತ ಮಾಹಿತಿಯನ್ನು ನೀಡಿದರು.
‘‘ಮೊಟ್ಟ ಮೊದಲ ಗೂಗಲ್ ಎಐ ಕೇಂದ್ರವನ್ನು ವಿಶಾಖಪಟ್ಟಣಮ್‌ನಲ್ಲಿ ಸ್ಥಾಪಿಸುವ ನಮ್ಮ ಯೋಜನೆಯ ವಿವರಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಹಂಚಿಕೊಂಡಿರುವುದಕ್ಕೆ ಸಂತೋಷವಾಗಿದೆ’’ ಎಂದು ಪಿಚೈ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ. ‘‘ಇದೊಂದು ದೊಡ್ಡ ಬೆಳವಣಿಗೆಯಾಗಿದೆ’’ ಎಂದು ಅವರು ಬಣ್ಣಿಸಿದ್ದಾರೆ.
‘‘ಈ ಕೇಂದ್ರವು ಗಿಗಾವಾಟ್ ಮಟ್ಟದ ಕಂಪ್ಯೂಟರ್ ಸಾಮರ್ಥ್ಯ, ಒಂದು ನೂತನ ಅಂತರ್‌ರಾಷ್ಟ್ರೀಯ ಸಾಗರಗತ ಸಂಪರ್ಕ (ಸಬ್‌ಸೀ ಗೇಟ್‌ವೇ) ಮತ್ತು ಬೃಹತ್ ಮಟ್ಟದ ಇಂಧನ ಮೂಲಸೌಕರ್ಯವನ್ನು ಒಗ್ಗೂಡಿಸುತ್ತದೆ. ಇದರ ಮೂಲಕ ನಾವು ನಮ್ಮ ನೂತನ ತಂತ್ರಜ್ಞಾನವನ್ನು ಭಾರತದ ಉದ್ದಿಮೆಗಳು ಮತ್ತು ಬಳಕೆದಾರರಿಗೆ ತರುತ್ತೇವೆ. ಇದು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹೊಸತನವನ್ನು ತರುತ್ತದೆ ಮತ್ತು ದೇಶಾದ್ಯಂತ ಬೆಳವಣಿಗೆಗೆ ಚಾಲನೆ ನೀಡುತ್ತದೆ’’ ಎಂದು ಅವರು ಬರೆದಿದ್ದಾರೆ.
ಗೂಗಲ್ ತನ್ನ ವಿಶಾಖಪಟ್ಟಣಮ್ ಸಂಕೀರ್ಣದಲ್ಲಿ ಪ್ರಮುಖ ದತ್ತಾಂಶ ಕೇಂದ್ರ ಮತ್ತು ಕೃತಕ ಬುದ್ಧಿಮತ್ತೆ ನೆಲೆಯನ್ನು ಹೊಂದಲಿದೆ. ಅದು ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 15 ಬಿಲಿಯ ಡಾಲರ್ (ಸುಮಾರು 1.33 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಮಾಡಲಿದೆ ಎಂದು ಸುಂದರ ಪಿಚೈ ತಿಳಿಸಿದ್ದಾರೆ.