ತೆಲುಗು ಮಾತನಾಡಲಿರುವ ಪಂಜಾಬಿ ಮಕ್ಕಳು!
ಸಾಂದರ್ಭಿಕ ಚಿತ್ರ |PC : newindianexpress.com
ಚಂಡೀಗಢ: ತಮ್ಮ ಆಯ್ಕೆಯ ಭಾರತೀಯ ಭಾಷೆಯೊಂದರಲ್ಲಿ ಪ್ರಾಥಮಿಕ ಸಂವಾದದ ಕೌಶಲವನ್ನು ರೂಢಿಸಿಕೊಳ್ಳುವಂತೆ ಮಾಡುವ ವಿನೂತನ ಪ್ರಯತ್ನದ ಭಾಗವಾಗಿ, ಒಂದು ವಾರ ಕಾಲ ನಡೆಯಲಿರುವ ಭಾರತೀಯ ಭಾಷಾ ಬೇಸಿಗೆ ಶಿಬಿರದಲ್ಲಿ ಪಂಜಾಬ್ ರಾಜ್ಯದ ಸರಕಾರಿ ಶಾಲೆಗಳ ಅರನೇ ತರಗತಿಯಿಂದ ಹತ್ತನೆ ತರಗತಿವರೆಗಿನ ವಿದ್ಯಾರ್ಥಿಗಳು ತೆಲುಗು ಭಾಷೆಯನ್ನು ಕಲಿಯಲಿದ್ದಾರೆ.
ಈ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ನಿರ್ದೇಶನದಲ್ಲಿ ಹೇಳಲಾಗಿದೆ.
ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಎಲ್ಲ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ನೀಡಿರುವ ನಿರ್ದೇಶನದ ಪ್ರಕಾರ, ಮೇ 26ರಿಂದ ಜೂನ್ 5ರವರೆಗೆ ರಾಜ್ಯಾದ್ಯಂತ ಇರುವ ಸರಕಾರಿ ಶಾಲೆಗಳಲ್ಲಿ ಆಯೋಜಿಸಲಾಗುವ ಬೇಸಿಗೆ ಶಿಬಿರದಲ್ಲಿ ಆರನೆಯ ತರಗತಿಯಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೆಲುಗು ಭಾಷೆಯನ್ನು ಕಲಿಸಲಾಗುವುದು ಎಂದು ಹೇಳಲಾಗಿದೆ.
“ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯನ್ನು ಹೊರತುಪಡಿಸಿ, ಮತ್ತೊಂದು ಭಾರತೀಯ ಭಾಷೆಯಲ್ಲಿ ಪ್ರಾಥಮಿಕ ಸಂವಾದ ಕೌಶಲವನ್ನು ರೂಢಿಸಿಕೊಳ್ಳುವಂತೆ ಮಾಡುವುದು ಈ ಚಿಂತನೆಯ ಮುಖ್ಯ ಉದ್ದೇಶವಾಗಿದೆ” ಎಂದು ಮೇ 23ರಂದು ಹೊರಡಿಸಲಾಗಿರುವ ಈ ನಿರ್ದೇಶನದಲ್ಲಿ ಹೇಳಲಾಗಿದೆ. ತೆಲುಗು ಕಲಿಕೆ ತರಗತಿಗಳನ್ನು ಬೇಸಿಗೆ ರಜಾಕಾಲವಾದ ಮೇ 26ರಿಂದ ಜೂನ್ 5ರವರೆಗೆ ಹಮ್ಮಿಕೊಳ್ಳಲಾಗುತ್ತದೆ.
ಈ ನಡುವೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ನೆಪದಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಲಾಗುತ್ತಿದೆ ಎಂದು ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ತಮಿಳುನಾಡು, ಕೇಂದ್ರ ಸರಕಾರದ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿತ್ತು ಹಾಗೂ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ತಮಿಳುನಾಡು ರಾಜ್ಯದ ವಿದ್ಯಾರ್ಥಿಗಳಿಗೆ ಬೋಧಿಸಲು ನಿರಾಕರಿಸಿತ್ತು. ಇದರ ಬೆನ್ನಿಗೇ, ದಕ್ಷಿಣ ಭಾರತದ ಪ್ರಮುಖ ಭಾಷೆಗಳ ಪೈಕಿ ಒಂದಾದ ತೆಲುಗನ್ನು ಶಾಲಾ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಸಂವಾದದ ಭಾಷೆಯನ್ನಾಗಿ ಕಲಿಸಲು ಕೇಂದ್ರ ಶಿಕ್ಷಣ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರದ ಈ ನಡೆಯನ್ನು ಹಿಂದಿ ಹೇರಿಕೆಯ ವಿರುದ್ಧ ರೂಪುಗೊಂಡಿರುವ ಜನಾಭಿಪ್ರಾಯಕ್ಕೆ ದೊರೆತಿರುವ ಜಯ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸೌಜನ್ಯ: newindianexpress.com