ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ
"ಪ್ರತಿಯೊಬ್ಬ ಭಾರತೀಯನ ಮೇಲೆ ಕಣ್ಗಾವಲಿಡುವ ತಂತ್ರ": ವಿಪಕ್ಷಗಳಿಂದ ವಿರೋಧ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತದಲ್ಲಿ ತಯಾರಾಗುವ ಅಥವಾ ಆಮದು ಮಾಡಿಕೊಳ್ಳಲಾಗುವ ಎಲ್ಲಾ ಮೊಬೈಲ್‌ಗಳಲ್ಲಿಯೂ ‘ಸಂಚಾರ ಸಾಥಿ’ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುವಂತೆ ಮೊಬೈಲ್ ಫೋನ್ ತಯಾರಕರಿಗೆ ಕೇಂದ್ರವು ನಿರ್ದೇಶನ ನೀಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿರುವ (ಇನ್ನೂ ಖರೀದಿಯಾಗದ) ಮೊಬೈಲ್‌ಗಳಲ್ಲಿ ಸಾಫ್ಟ್ ವೇರ್ ಅಪ್ಡೇಟ್ ವೇಳೆ ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುವಂತೆ ಸಚಿವಾಲಯ ಹೇಳಿದೆ. ಸೈಬರ್ ವಂಚನೆಯಿಂದ ನಾಗರಿಕರನ್ನು ರಕ್ಷಿಸುವ ಮತ್ತು ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಮರುಪಡೆಯಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಸರಕಾರ ಹೇಳಿಕೊಂಡಿದೆ.
ಆದರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಇದು ಮೊಬೈಲ್ ಮೇಲೆ ಕಣ್ಗಾವಲು ಇಡುವ ಒಂದು ತಂತ್ರವಾಗಿದೆ ಎಂದು ಆರೋಪಿಸಿದೆ. ಈ ನಿರ್ದೇಶನವನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿವೆ.
ಏನಿದು ‘ಸಂಚಾರ ಸಾಥಿ’ ಆ್ಯಪ್?
‘ಸಂಚಾರ ಸಾಥಿ’ ಆ್ಯಪ್ ಅನ್ನು 2023ರಲ್ಲಿ ಬಿಡುಗಡೆ ಮಾಡಲಾಗಿದೆ. ಮೊಬೈಲ್ ಕಳ್ಳತನದ ಮೂಲಕ ಅಥವಾ ಡುಪ್ಲಿಕೇಟ್ ಸಿಮ್ ಮೂಲಕ ಐಎಂಇಐ ಸಂಖ್ಯೆ ನಕಲು ಮಾಡಿಕೊಂಡು ಎಸಗುವ ವಂಚನೆಯನ್ನು ಪತ್ತೆ ಮಾಡಲು ಈ ಆ್ಯಪ್ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ‘ಸಂಚಾರ ಸಾಥಿ’ ಎಂಬ ವೆಬ್‌ಸೈಟ್ ಕೂಡ ಇದೆ.
ಕಳ್ಳತನವಾದ ಮೊಬೈಲ್‌ನ ಐಎಂಇಐ ಸಂಖ್ಯೆ ಬಳಿಸಿಕೊಂಡು ಆ ಮೊಬೈಲ್ ಅನ್ನು ಈ ಆ್ಯಪ್ ಮೂಲಕ ನಿಷ್ಕ್ರಿಯಗೊಳಿಸಬಹುದು. ಐಎಂಇಐ ಸಂಖ್ಯೆಯನ್ನು ನಕಲು ಮಾಡಿಕೊಂಡು ಬೇರೆ ದೇಶದಲ್ಲಿ ಕುಳಿತು ಸೈಬರ್ ಅಪರಾಧ ಬ್ಯಾಂಕ್ ಖಾತೆ ಬಳಿಕ ಸೇರಿದಂತೆ ಹಲವು ಅಕ್ರಮ ಎಸಗಲಾಗುತ್ತದೆ. ಮೊಬೈಲ್ ಖರೀದಿಸುವವರು ಖರೀದಿಗೂ ಮುನ್ನ ಈ ಆ್ಯಪ್ ಮೂಲಕ ತಾವು ಖರೀದಿಸುವ ಐಎಂಇಐ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಬಹುದು.
ತಮ್ಮ ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್ ಬಳಸಿಕೊಂಡು ಅಕ್ರಮವಾಗಿ ಸಿಮ್ ಖರೀದಿ ಮಾಡಲಾಗಿದ್ದರೆ ಈ ಆ್ಯಪ್ ಮೂಲಕ ಅಂಥ ಅಕ್ರಮ ಸಂಪರ್ಕವನ್ನು ನಿಷ್ಕ್ರಿಯ ಮಾಡಬಹುದು
ವಿಪಕ್ಷಗಳಿಂದ ವಿರೋಧ
ಫೋನ್ ತಯಾರಕರಿಗೆ ಕೇಂದ್ರ ಸರಕಾರ ನೀಡಿರುವ ನಿರ್ದೇಶನಗಳ ಬಗ್ಗೆ ವಿರೋಧ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯೆಯನ್ನು ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಈ ಕ್ರಮ ಅಸಂವಿಧಾನಿಕ. ಬಿಗ್ ಬ್ರದರ್ ನಮ್ಮ ಮೇಲೆ ಕಣ್ಗಾವಲಿಡಲು ಸಾಧ್ಯವಿಲ್ಲ. ಗೌಪ್ಯತೆಯ ಹಕ್ಕು ಸಂವಿಧಾನದ 21ನೇ ವಿಧಿಯಲ್ಲಿ ಪ್ರತಿಪಾದಿಸಲಾದ ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸರಕಾರದಿಂದ ಮೊದಲೇ ಇನ್‌ಸ್ಟಾಲ್ ಮಾಡಲಾದ, ಯಾವತ್ತೂ ಡಿಲಿಟ್ ಮಾಡಲಾಗದ ಈ ಆ್ಯಪ್ ಇಡೀ ದೇಶದ ಜನರ ಮೇಲೆ ಗೂಢಚಾರಿಕೆ ಮಾಡುವ ಸಾಧನವಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ನಡೆ-ನುಡಿ, ಒಡನಾಟ, ತೀರ್ಮಾನಗಳನ್ನೆಲ್ಲಾ ಗಮನಿಸುವ ಒಂದು ಮಾರ್ಗವಾಗಿದೆ. ನಾವು ಈ ಆದೇಶವನ್ನು ಸಂಪೂರ್ಣ ತಿರಸ್ಕರಿಸುತ್ತೇವೆ ಮತ್ತು ತಕ್ಷಣ ಇದನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ,