×
Ad

12%, 28% ಜಿಎಸ್‌ಟಿ ಮಜಲುಗಳ ರದ್ದತಿ ಪ್ರಸ್ತಾವಕ್ಕೆ ಸಚಿವರ ಸಮಿತಿ ಒಪ್ಪಿಗೆ

Update: 2025-08-21 20:33 IST

ನಿರ್ಮಲಾ ಸೀತಾರಾಮನ್ | PC:  X/@FinMinIndia

ಹೊಸದಿಲ್ಲಿ, ಆ. 21: ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯ 12% ಮತ್ತು 28% ಮಜಲುಗಳನ್ನು ತೆಗೆದುಹಾಕುವ ಪ್ರಸ್ತಾವಕ್ಕೆ ಸಚಿವರ ಸಮಿತಿಯು ಗುರುವಾರ ಬೆಂಬಲ ಸೂಚಿಸಿದೆ. ಇನ್ನು ಈ ಪ್ರಸ್ತಾವವು ಅಂತಿಮ ಪರಿಶೀಲನೆಗಾಗಿ ಜಿಎಸ್‌ಟಿ ಮಂಡಳಿಗೆ ಹೋಗಲಿದೆ.

ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸುವುದಾಗಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಬಳಿಕ ಈ ಬೆಳವಣಿಗೆಗಳು ಸಂಭವಿಸಿವೆ.

ಈ ಪ್ರಸ್ತಾವಕ್ಕೆ ಜಿಎಸ್‌ಟಿ ಮಂಡಳಿಯು ಅನುಮೋದನೆ ನೀಡಿದ ಬಳಿಕ, ಹಾಲಿ ನಾಲ್ಕು ಜಿಎಸ್‌ಟಿ ಮಜಲುಗಳ ಪೈಕಿ 5% ಮತ್ತು 18% ಮಾತ್ರ ಉಳಿಯಲಿವೆ. ಇದರ ಜೊತೆಗೆ, ಅತಿ ವಿಲಾಸಿ ವಸ್ತುಗಳಿಗೆ 40% ತೆರಿಗೆ ಮಜಲನ್ನು ವಿಧಿಸಬಹುದಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲಾ ರಾಜ್ಯಗಳ ಸಚಿವರು ಸದಸ್ಯರಾಗಿರುತ್ತಾರೆ. ಮಂಡಳಿಯು, ರಾಜ್ಯಗಳ ತೆರಿಗೆ ಪಾಲು ಮತ್ತು ಆದಾಯ ನಷ್ಟಕ್ಕೆ ಪರಿಹಾರ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ಪರಿಗಣಿಸುತ್ತದೆ.

‘‘ಕೇಂದ್ರ ಸರಕಾರ ತಂದಿರುವ ಪ್ರಸ್ತಾವಗಳಿಗೆ ಸಂಬಂಧಿಸಿ ಪ್ರತಿಯೊಬ್ಬರೂ ಸಲಹೆಗಳನ್ನು ನೀಡಿದ್ದಾರೆ. ಕೆಲವು ರಾಜ್ಯಗಳು ಕೆಲವು ಬೇಡಿಕೆಗಳನ್ನು ಮುಂದಿಟ್ಟಿವೆ. ಇವುಗಳನ್ನು ಜಿಎಸ್‌ಟಿ ಮಂಡಳಿಗೆ ವಹಿಸಲಾಗಿದೆ’’ ಎಂದು ಸಚಿವರ ಸಮಿತಿಯ ಸಂಚಾಲಕ ಹಾಗೂ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News