ಗುಜರಾತ್ | 10ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆಗೈದ 8ನೇ ತರಗತಿ ವಿದ್ಯಾರ್ಥಿ!
"ಭದ್ರತಾ ಸಿಬ್ಬಂದಿಗಳು ಗಾಯಗೊಂಡ ವಿದ್ಯಾರ್ಥಿಯ ರಕ್ಷಣೆಗೆ ಧಾವಿಸಲಿಲ್ಲ"
ಹೊಸದಿಲ್ಲಿ, ಆ. 20: ಹತ್ತನೇ ತರಗತಿ ವಿದ್ಯಾರ್ಥಿಯನ್ನು 8 ತರಗತಿ ವಿದ್ಯಾರ್ಥಿ ಇರಿದು ಹತ್ಯೆಗೈದ ಘಟನೆ ಗುಜರಾತ್ ನ ಅಹ್ಮದಾಬಾದ್ ನಗರದ ಖೊಖ್ರದಲ್ಲಿರುವ ಸೆವೆಂಥ್ ಡೇ ಸ್ಕೂಲ್‌ನಲ್ಲಿ ಮಂಗಳವಾರ ನಡೆದಿದೆ.
ಇದು ನಗರದಲ್ಲಿ ಆಘಾತದ ಅಲೆಯನ್ನೇ ಸೃಷ್ಟಿಸಿದ್ದು, ಶಾಲೆಯಲ್ಲಿ ಭದ್ರತೆ ಹಾಗೂ ಶಿಸ್ತಿನ ಕೊರತೆಯ ಬಗ್ಗೆ ಬೆಳಕು ಚೆಲ್ಲಿದೆ.
ಈ ಇಬ್ಬರು ವಿದ್ಯಾರ್ಥಿಗಳ ನಡುವೆ ಜಗಳವಿತ್ತು. ಶಾಲೆ ಬಿಡುವ ಹೊತ್ತಿಗೆ ಅದು ದೊಡ್ಡ ಜಗಳಕ್ಕೆ ತಿರುಗಿತು. ಶಾಲೆಯಿಂದ ಕೆಲವೇ ಹೆಜ್ಜೆಗಳ ದೂರದಲ್ಲಿರುವ ಮನಿಯಾಶಾ ಸೊಸೈಟಿಯ ಗೇಟಿನ ಸಮೀಪ 8ನೇ ತರಗತಿಯ ವಿದ್ಯಾರ್ಥಿ ಹರಿತವಾದ ಪ್ರಯೋಗಾಲಯದ ಉಪಕರಣದಿಂದ 10ನೇ ತರಗತಿ ವಿದ್ಯಾರ್ಥಿ ಹೊಟ್ಟೆಗೆ ಇರಿದ ಎಂದು ಮೂಲಗಳು ತಿಳಿಸಿವೆ.
ಇದರಿಂದ ಗಾಯಗೊಂಡ 10ನೇ ತರಗತಿ ವಿದ್ಯಾರ್ಥಿ ಕುಸಿದು ಬೀಳುವ ಮುನ್ನ ಶಾಲೆಯ ಆವರಣದ ಹಿಂದೆ ಓಡಿದ. ಜೊತೆಗಿದ್ದ ವಿದ್ಯಾರ್ಥಿಗಳು ಕೂಡಲೇ ಆತನನ್ನು ಸದಾರ್ ಪಟೇಲ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದರು. ಆದರೆ, ಆತ ಬುಧವಾರ ಮುಂಜಾನೆ ಮೃತಪಟ್ಟ ಎಂದು ಅವು ಹೇಳಿವೆ.
ಪ್ರತ್ಯಕ್ಷದರ್ಶಿಯಾಗಿರುವ ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಘಟನೆಯ ಭೀಕರತೆಯನ್ನು ಸ್ಥಳೀಯ ಮಾಧ್ಯಮಕ್ಕೆ ವಿವರಿಸಿದ್ದಾನೆ. ‘‘ನಾನು ಗದ್ದಲ ಕೇಳಿ ಒಳಗೆ ಓಡಿದೆ. ಓರ್ವ ವಿದ್ಯಾರ್ಥಿ ಭೌತಶಾಸ್ತ್ರ ಪ್ರಯೋಗಾಲಯದ ಉಪಕರಣದಿಂದ ನನ್ನ ಸಹಪಾಠಿಯ ಹೊಟ್ಟೆಗೆ ಇರಿದಿದ್ದ. ನಾನು ಇದೆಲ್ಲವನ್ನು ನೋಡಿದೆ. ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ರಕ್ಷಿಸಲು ಪ್ರಯತ್ನಿಸಲಿಲ್ಲ. ಅವರು ನಿಂತು ನೋಡುತ್ತಿದ್ದರು’’ ಎಂದು ಆತ ಹೇಳಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.