ಗುಜರಾತ್: ಶಾಲೆಯಲ್ಲಿ ವಿದ್ಯಾರ್ಥಿ ಹತ್ಯೆ ಪ್ರಕರಣ; ಬೃಹತ್ ಪ್ರತಿಭಟನೆ
PC : NDTV
ಗಾಂಧಿನಗರ, ಆ. 21: ಖಾಸಗಿ ಶಾಲೆಯೊಂದರಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯನ್ನು 8ನೇ ತರಗತಿ ವಿದ್ಯಾರ್ಥಿ ಹತ್ಯೆಗೈದಿರುವ ಕುರಿತಂತೆ ಅಹ್ಮದಾಬಾದ್ ನಲ್ಲಿ ಶುಕ್ರವಾರ ಕೂಡ ಪ್ರತಿಭಟನೆ ಮುಂದುವರಿದಿದೆ.
ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಕಾಂಗ್ರೆಸ್ ನ ವಿದ್ಯಾರ್ಥಿ ಘಟಕ, ಶಾಲೆಯನ್ನು ಮುಚ್ಚುವಂತೆ ಆಗ್ರಹಿಸಿದೆ.
ಸೆವೆಂಥ್ ಡೇ ಶಾಲೆಯ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಕೂಡ ಪ್ರತಿಭಟನೆ ನಡೆಸಿದರು. ಶಾಲೆಯಲ್ಲಿ ನಿರಂತರ ಕಳವು, ವಾಗ್ವಾದ, ಜಗಳದ ಘಟನೆಗಳು ನಡೆಯುತ್ತಿವೆ. ದೂರು ನೀಡಿದರೂ ಶಾಲೆಯ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಸಣ್ಣ ಜಗಳವೊಂದರ ಸಂದರ್ಭ 10ನೇ ತರಗತಿ ವಿದ್ಯಾರ್ಥಿಯನ್ನು 8ನೇ ತರಗತಿ ವಿದ್ಯಾರ್ಥಿ ಇರಿದು ಹತ್ಯೆಗೈದ ಕುರಿತಂತೆ ಗುಂಪೊಂದು ಶಾಲೆಯಲ್ಲಿ ದಾಂಧಲೆ ನಡೆಸಿದ ಹಾಗೂ ಸಿಬ್ಬಂದಿಗೆ ಥಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಘಟನೆ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು. ಶಾಲೆಯನ್ನು ಮುಚ್ಚುವಂತೆ ಆಗ್ರಹಿಸಿತು. ಶಾಲೆಯ ಆವರಣ ಪ್ರವೇಶಿಸಲು ಪ್ರಯತ್ನಿಸಿದ ಹಲವು ಸದಸ್ಯರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅನಂತರ ಸದಸ್ಯರು ಹಾಗೂ ಅಲ್ಲಿ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆಯಿತು.
ವಿಶ್ವ ಹಿಂದೂ ಪರಿಷತ್ ಕೂಡ ಪ್ರತಿಭಟನೆ ನಡೆಸಿತು. ಅದು ಕರೆ ನೀಡಿದ ಬಂದ್‌ನ ಹಿನ್ನೆಲೆಯಲ್ಲಿ ಮಣಿನಗರ್, ಖೋಖಾರ ಹಾಗೂ ಇಸಾನ್ ಪುರ ಪ್ರದೇಶದಲ್ಲಿ ಸುಮಾರು 200 ಶಾಲೆಗಳು ಮುಚ್ಚಿದ್ದವು.
‘‘ಲಕ್ಷಾಂತರ ರೂಪಾಯಿ ತೆಗೆದುಕೊಂಡು ಅವರು ಏನನ್ನು ಬೋಧಿಸುತ್ತಿದ್ದಾರೆ? ಶಾಲೆ ಎಂದಿಗೂ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ. ಶಾಲಾ ಆಡಳಿತ ಮಂಡಳಿ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ, ಈ ಕೊಲೆ ನಡೆಯುತ್ತಿರಲಿಲ್ಲ’’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೋಷಕರೊಬ್ಬರು ತಿಳಿಸಿದ್ದಾರೆ.