×
Ad

ಗುಜರಾತ್: ನಾಟಕದಲ್ಲಿ ಬುರ್ಕಾಧಾರಿ ಬಾಲಕಿಯರನ್ನು ‘ಭಯೋತ್ಪಾದಕ’ರನ್ನಾಗಿ ಬಿಂಬಿಸಿದ್ದ ಶಾಲೆಗೆ ಕ್ಲೀನ್ ಚಿಟ್

Update: 2025-08-29 16:52 IST

Screengrab: X/@indianrightwing

ಭಾವನಗರ: ಆ.15ರಂದು ಶಾಲಾವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಪ್ರದರ್ಶಿಸಲಾದ ನಾಟಕದಲ್ಲಿ ಬುರ್ಕಾ ಧರಿಸಿದ್ದ ಬಾಲಕಿಯರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಭಾವನಗರದ ಕುಂಭಾರವಾಡಾ ಪ್ರದೇಶದಲ್ಲಿಯ ಡಾ.ಎಪಿಜೆ ಅಬ್ದುಲ್ ಕಲಾಂ ಪ್ರಾಥಮಿಕ ಶಾಲೆಗೆ ಜಿಲ್ಲಾ ಶಿಕ್ಷಣಾಧಿಕಾರಿಗಳು(ಡಿಇಒ) ಕ್ಲೀನ್ ಚಿಟ್ ನೀಡಿದ್ದಾರೆ. ಅದು ಸಂಪೂರ್ಣವಾಗಿ ಅನುದ್ದಿಷ್ಟವಾಗಿತ್ತು ಮತ್ತು ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಅಥವಾ ಕೋಮು ಸೌಹಾರ್ದವನ್ನು ಕದಡುವ ದುರುದ್ದೇಶವನ್ನು ಹೊಂದಿರಲಿಲ್ಲ ಎಂದು ಮುನ್ಸಿಪಲ್ ಶಾಲಾ ಮಂಡಳಿಯ ಆಡಳಿತಾತ್ಮಕ ಆಡಳಿತಾಧಿಕಾರಿ (ಎಒ) ಡಿಇಒಗೆ ಸಲ್ಲಿಸಿದ್ದ ವಾಸ್ತವಿಕ ವರದಿಯಲ್ಲಿ ತಿಳಿಸಿದ್ದರು.

ಯೂಟ್ಯೂಬ್‌ನಲ್ಲಿ ಇದೇ ರೀತಿಯ ಕೃತಿಯ ಆಧಾರದಲ್ಲಿ ವಿದ್ಯಾರ್ಥಿನಿಯರು ನಾಟಕದ ಪರಿಕಲ್ಪನೆಯನ್ನು ರೂಪಿಸಿದ್ದರು. ನಾಟಕದಲ್ಲಿಯ ಪಾತ್ರಧಾರಿಗಳ ವೇಷಭೂಷಣಗಳನ್ನೂ ವಿದ್ಯಾರ್ಥಿನಿಯರೇ ನಿರ್ಧರಿಸಿದ್ದರು ಎಂದು ಶಿಕ್ಷಕರು ಮತ್ತು ಪೋಷಕರ ಹೇಳಿಕೆಗಳನ್ನು ಉಲ್ಲೇಖಿಸಿ ಎಒ ಮುಂಜಾಲ್ ಬದ್ಮಾಲಿಯಾ ಸಲ್ಲಿಸಿರುವ ವರದಿಯು ತಿಳಿಸಿದೆ.

ಬುರ್ಕಾ ಧರಿಸಿದ್ದ ಬಾಲಕಿಯರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಿದ್ದರ ವಿರುದ್ಧ ಸ್ಥಳೀಯ ಸಾಮಾಜಿಕ ಸಂಘಟನೆ ‘ಬಂಧಾರಣ ಬಚಾವ್ ಸಮಿತಿ ಭಾವನಗರ’ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಡಿಇಒ ಹಿತೇಂದ್ರಸಿನ್ಹ ಡಿ.ಪಧೇರಿಯಾ ಅವರು ವಾಸ್ತವಿಕ ವರದಿಯನ್ನು ಸಲ್ಲಿಸುವಂತೆ ಆಡಳಿತಾತ್ಮಕ ಅಧಿಕಾರಿಗೆ ಆದೇಶಿಸಿದ್ದರು.

ಆ.15ರಂದು ಪ್ರದರ್ಶಿಸಲಾದ ‘ಆಪರೇಷನ್ ಸಿಂಧೂರ’ ನಾಟಕವನ್ನು ಶಾಲಾ ಪ್ರಾಂಶುಪಾಲರು,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ದುರುದ್ದೇಶವಿಲ್ಲದೆ ಪ್ರಸ್ತುತ ಪಡಿಸಿದ್ದರು. ಆದಾಗ್ಯೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು,ಭವಿಷ್ಯದಲ್ಲಿ ಯಾರದೇ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಯಾವುದೇ ಕಾರ್ಯಕ್ರಮವನ್ನು ಆಯೋಜಿಸದಂತೆ ಶಾಲೆಯ ಸಿಬ್ಬಂದಿಗಳನ್ನು ಆಗ್ರಹಿಸಲಾಗಿದೆ ಎಂದು ವರದಿಯು ತಿಳಿಸಿದೆ.

ಬುರ್ಕಾಗಳನ್ನು ಧರಿಸುವಂತೆ ಯಾರೂ ವಿದ್ಯಾರ್ಥಿನಿಯರನ್ನು ಒತ್ತಾಯಿಸಿರಲಿಲ್ಲ, ಅದು ಅವರದೇ ನಿರ್ಧಾರವಾಗಿತ್ತು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬದ್ಮಾಲಿಯಾ ತಿಳಿಸಿದರು.

600ಕ್ಕೂ ಅಧಿಕ ವಿದ್ಯಾರ್ಥಿನಿಯರು ಓದುತ್ತಿರುವ ಬಾಲಕಿಯರ ಈ ಶಾಲೆಯಲ್ಲಿ ಮುಸ್ಲಿಮ್ ಶಿಕ್ಷಕರೂ ಇದ್ದು ನಾಟಕ ಪ್ರದರ್ಶನದಲ್ಲಿ ಅವರೂ ನೆರವಾಗಿದ್ದರು. ಶಾಲೆಯಲ್ಲಿ ಯಾವುದೇ ತಾರತಮ್ಯವನ್ನು ತಾವು ಅನುಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದೂ ಬದ್ಮಾಲಿಯಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News