×
Ad

ಮೋದಿಯ ವಿಶ್ವಾಸ, ಅಮಿತ್ ಶಾರ ಕಿವಿಯಾದ ಹರ್ಷ್ ಸಾಂಘ್ವಿಗೆ ಗುಜರಾತ್ ನ ಡಿಸಿಎಂ ಗದ್ದುಗೆ

Update: 2025-10-17 22:28 IST

ಹರ್ಷ್ ಸಾಂಘ್ವಿ | Facebook/Harsh Sanghavi 

ಹೊಸದಿಲ್ಲಿ: ಗುಜರಾತ್ ಸಚಿವ ಸಂಪುಟದ ಪುನಾರಚನೆ ನಡೆದಿದ್ದು, ಈಗಷ್ಟೇ ನಲವತ್ತರ ಹರೆಯದಲ್ಲಿರುವ ಹರ್ಷ್ ಸಾಂಘ್ವಿ ಅವರು ಭೂಪೇಂದ್ರ ಪಟೇಲ್ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೇರುವ ಮೂಲಕ ಹಲವರ ಗಮನ ಸೆಳೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರ ಕಿವಿ ಎಂದೇ ಬಣ್ಣಿಸಲಾಗುತ್ತಿರುವ ಹರ್ಷ್ ಸಾಂಘ್ವಿ, ರಾಜ್ಯ ದರ್ಜೆಯ ಸಚಿವ ಸ್ಥಾನದಿಂದ ಏಕಾಏಕಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ಪಡೆಯುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದ್ದಾರೆ.

ಕೇವಲ 27 ವರ್ಷದವರಾಗಿದ್ದಾಗಲೇ ಸೂರತ್ ಜಿಲ್ಲೆಯ ಮಜುರಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಚುನಾಯಿತರಾಗಿದ್ದ ಹರ್ಷ್ ಸಾಂಘ್ವಿ, 2019 ಹಾಗೂ 2020ರಲ್ಲಿ ಕಾಣಿಸಿಕೊಂಡಿದ್ದ ಕೋವಿಡ್-19 ಮೊದಲ ಮತ್ತು ಎರಡನೆ ಅಲೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಹಾಗೂ ಈ ಅವಧಿಯಲ್ಲಿ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಕರ ಕಣ್ಮಣಿಯಾಗಿ ರಾಜಕೀಯದಲ್ಲಿ ಮುಂಚೂಣಿಗೆ ಬಂದವರು.

2010ರಿಂದ ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಹರ್ಷ್ ಸಾಂಘ್ವಿ, ಅದಕ್ಕೂ ಮುನ್ನ ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದ ಹಾಲಿ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದೆ ಪೂನಂ ಮಹಾಜನ್ ರೊಂದಿಗೂ ಕೆಲಸ ಮಾಡಿದ್ದರು.

ಆದರೆ, ತಾವು ಶಾಸಕರಾಗಿ ಆಯ್ಕೆಯಾದ ನಂತರ, ಕೋವಿಡ್ ಸಾಂಕ್ರಾಮಿಕದಲ್ಲಿ ನಿರುದ್ಯೋಗಿ ಯುವಕರಿಗಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಿ, ಸೂರತ್ ನಲ್ಲಿ ಪುಸ್ತಕ ಬ್ಯಾಂಕ್ ಅನ್ನು ಸ್ಥಾಪಿಸಿದ್ದರು.

ಇದರೊಂದಿಗೆ ಆದಿವಾಸಿ ಪ್ರದೇಶಗಳಲ್ಲಿ ತಾವು ಕೈಗೊಂಡ ಸಾಮಾಜಿಕ ಕಾರ್ಯಗಳ ಮೂಲಕ ಗುಜರಾತ್ ಬಿಜೆಪಿಯಲ್ಲಿ ಅತ್ಯಂತ ಬೇಡಿಕೆಯ ಯುವ ನಾಯಕರಾಗಿ ಬೆಳೆದು ನಿಂತರು. 2014ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಿದ್ದ ಹರ್ಷ್ ಸಾಂಘ್ವಿ, ಪ್ರಧಾನಿ ನರೇಂದ್ರ ಮೋದಿಯ ಕಾರ್ಯಕ್ರಮಗಳಿಗೂ ಮುನ್ನವೇ ಅನಿವಾಸಿ ಭಾರತೀಯರನ್ನು ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದರಿಂದಾಗಿ ಅವರು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ರ ನಂಬಿಕಸ್ಥ ಆಪ್ತರ ಪೈಕಿ ಒಬ್ಬರಾದರು.

2021ರಲ್ಲಿ ಭೂಪೇಂದ್ರ ಪಟೇಲ್ ಅವರ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಸೇರ್ಪಡೆಯಾಗಿದ್ದ ಹರ್ಷ್ ಸಾಂಘ್ವಿ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊಂದಿದ್ದ ಖಾತೆಗಳಿಗೆ ಸಮನಾಗಿ 9 ಖಾತೆಗಳನ್ನು ಪಡೆಯುವ ಮೂಲಕ, ಗುಜರಾತ್ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡರು. ನಂತರ, ಗೃಹ, ಕೈಗಾರಿಕೆಗಳು, ಕ್ರೀಡೆ ಇನ್ನಿತರ ಪ್ರಮುಖ ಖಾತೆಗಳು ಸೇರಿದಂತೆ ಸುಮಾರು 12 ಖಾತೆಗಳಿಗೆ ಅವರು ಸಚಿವರಾದರು.

“ಹರ್ಷ್ ಸಾಂಘ್ವಿಯ ಸಂಘಟನಾ ಸಾಮರ್ಥ್ಯದಿಂದ ಪ್ರಧಾನಿ ನರೇಂದ್ರ ಮೋದಿ ಪ್ರಭಾವಿತರಾಗಿದ್ದಾರೆ” ಎಂದು ಗುಜರಾತ್ ಬಿಜೆಪಿಯ ಉಪಾಧ್ಯಕ್ಷ ಜಾನಕ್ ಭಾಯಿ ಎಂ.ಪಟೇಲ್ ಹೇಳುತ್ತಾರೆ.

“ಸಾಂಘ್ವಿಯ ಸಂಘಟನಾ ಕೆಲಸ ಮಾತ್ರವಲ್ಲ, ಬದಲಿಗೆ ಕೋವಿಡ್ ಸಾಂಕ್ರಾಮಿಕದ ಪ್ರಥಮ ಮತ್ತು ದ್ವಿತೀಯ ಅಲೆಗಳೆರಡರ ಸಂದರ್ಭದಲ್ಲೂ ಅವರು ಮಾಡಿದ ಸಾಮಾಜಿಕ ಕೆಲಸಗಳು ಶ್ಲಾಘನೀಯವಾಗಿವೆ” ಎಂದೂ ಅವರು ಹೇಳುತ್ತಾರೆ.

“ಸೂರತ್ ಮಹಾನಗರ ಪಾಲಿಕೆ ಸಭಾಂಗಣದಲ್ಲಿ 200 ಐಸೊಲೇಷನ್ ವಾರ್ಡ್ ಗಳನ್ನು ಸ್ಥಾಪಿಸಿದ ಪ್ರಥಮ ಶಾಸಕ ಅವರಾಗಿದ್ದಾರೆ. ಅವರ ಸುಸಜ್ಜಿತ ಐಸೊಲೇಷನ್ ವಾರ್ಡ್ ಗಳನ್ನು ನೋಡಿದ ನಂತರ, ಇತರ ಶಾಸಕರೂ ಅವರನ್ನು ಅನುಸರಿಸಿದರು. ಕೋವಿಡ್ ಸಾಂಕ್ರಾಮಿಕದ ಎರಡನೆ ಅಲೆಯ ವೇಳೆ, ಅವರು ಪಿಪಿಇ ಕಿಟ್ ಗಳನ್ನು ಧರಿಸಿ ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದರು. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಅವರು ಆಮ್ಲಜನಕ ಹಾಗೂ ಹಾಸಿಗೆಗಳ ವ್ಯವಸ್ಥೆ ಮಾಡಿದ್ದರು” ಎಂದು ಅವರು ಸ್ಮರಿಸುತ್ತಾರೆ.

ಇಂತಹ ಹರ್ಷ್ ಸಾಂಘ್ವಿ ವಿವಾದಗಳಿಗೂ ಹೊರತಲ್ಲ. ಲವ್ ಜಿಹಾದ್ ನ ಕಟು ಟೀಕಾಕಾರರಾದ ಅವರು, “ಗುಜರಾತ್ ನಲ್ಲಿ ಲವ್ ಜಿಹಾದ್ ನಂತಹ ಕೃತ್ಯಗಳಿಗೆ ಅವಕಾಶವಿಲ್ಲ. ಅಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರನ್ನು ಕಠಿಣವಾಗಿ ಶಿಕ್ಷಿಸಲಾಗುವುದು” ಎಂದು ಬಹಿರಂಗವಾಗಿಯೇ ಘೋಷಿಸಿದ್ದರು.

ಕೋವಿಡ್ ಸಾಂಕ್ರಾಮಿಕದ ಎರಡನೆ ಅಲೆಯ ವೇಳೆ ಆ್ಯಂಟಿ ವೈರಲ್ ಔಷಧಿಯಾದ ರೆಮ್ಡೆಸಿವಿರ್ ಕೊರತೆ ಎದುರಾದಲೂ ಅವರು ವಿವಾದಕ್ಕೀಡಾಗಿದ್ದರು. ಆಗ ಅವರು 5,000 ರೆಮ್ಡೆಸಿವಿರ್ ಇಂಜೆಕ್ಷನ್ ಗಳನ್ನು ಉಚಿತವಾಗಿ ಹಂಚಿದ್ದರು. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ, “ರೆಮ್ಡೆಸಿವಿರ್ ಇಂಜೆಕ್ಷನ್ ಅನ್ನು ಸಹಾನುಭೂತಿ ಹಾಗೂ ಮಾನವೀಯತೆಯ ನೆಲೆಯಲ್ಲಿ ಸೂರತ್ ನ ಬಿಜೆಪಿ ಕಚೇರಿಯಲ್ಲಿ ಅಗತ್ಯವಿರುವ ರೋಗಿಗಳಿಗೆ ವಿತರಿಸಲಾಗಿತ್ತು” ಎಂದು ಗುಜರಾತ್ ಹೈಕೋರ್ಟ್ ಎದುರು ಸ್ಪಷ್ಟೀಕರಣ ನೀಡಿದ್ದರು.

2014ರ ಆಸ್ಟ್ರೇಲಿಯಾ ಪ್ರವಾಸವಿರಲಿ ಅಥವಾ 2017ರ ಇಸ್ರೇಲ್ ಪ್ರವಾಸವಿರಲಿ, ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸಗಳಿಗೂ ಮುನ್ನವೇ ಅನಿವಾಸಿ ಭಾರತೀಯರನ್ನು ಸಂಪರ್ಕಿಸುವಲ್ಲಿ ಹರ್ಷ್ ಸಾಂಘ್ವಿ ತೊಡಗಿಸಿಕೊಳ್ಳುತ್ತಿದ್ದುದೇ ಅವರ ರಾಜಕೀಯ ಯಶಸ್ಸಿಗೆ ಪ್ರಮುಖ ಕಾರಣ ಎನ್ನುತ್ತಾರೆ ಮತ್ತೊಬ್ಬ ಬಿಜೆಪಿ ನಾಯಕರು.

ಸೌಜನ್ಯ: theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News