×
Ad

ಹಲ್ದ್ವಾನಿ ಹಿಂಸಾಚಾರದ ಕೇಂದ್ರಬಿಂದು ಬನಭೂಲ್ಪುರದಲ್ಲಿ ಏಳು ದಿನಗಳ ಬಳಿಕ ಕರ್ಫ್ಯೂ ಸಡಿಲಿಕೆ

Update: 2024-02-15 21:06 IST

Photo : PTI

ಹಲ್ದ್ವಾನಿ (ಉತ್ತರಾಖಂಡ) : ‘ಅಕ್ರಮ’ ಮದರಸದ ನೆಲಸಮ ಕುರಿತು ಹಿಂಸಾಚಾರದಿಂದ ತತ್ತರಿಸಿದ್ದ ಹಲ್ದ್ವಾನಿಯ ಬನಭೂಲ್ಪುರ ಪ್ರದೇಶದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಏಳು ದಿನಗಳ ಬಳಿಕ ಗುರುವಾರ ಕೆಲವು ಗಂಟೆಗಳ ಕಾಲ ಸಡಿಲಿಸಲಾಗಿತ್ತು.

ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಸಿಂಗ್ ಅವರ ಆದೇಶಕ್ಕೆ ಅನುಗುಣವಾಗಿ ಗೌಜಾಜಾಲಿ, ರೈಲ್ವೆ ಬಝಾರ್ ಮತ್ತು ಎಫ್ಸಿಐ ಗೋದಾಮು ಪ್ರದೇಶದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಹಾಗೂ ಬನಭೂಲ್ಪುರದ ಇತರ ಭಾಗಗಳಲ್ಲಿ ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಸಡಿಲಿಸಲಾಗಿತ್ತು.

ಫೆ.8ರಂದು ಬನಭೂಲ್ಪುರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದರಸದ ನೆಲಸಮ ಕಾರ್ಯಾಚರಣೆ ಸಂದರ್ಭ ಹಿಂಸಾಚಾರ ಭುಗಿಲೆದ್ದಿತ್ತು. ಪೋಲಿಸರು ಮತ್ತು ನಗರಸಭಾ ಸಿಬ್ಬಂದಿಗಳ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿ ಪೆಟ್ರೋಲ್ ಬಾಂಬ್ಗಳನ್ನು ಎಸೆದಿದ್ದು, ಹೆಚ್ಚಿನ ಪೋಲಿಸ್ ಸಿಬ್ಬಂದಿಗಳು ಸ್ವಯಂರಕ್ಷಣೆಗಾಗಿ ಪೋಲಿಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದರು. ಬಳಿಕ ಉದ್ರಿಕ್ತ ಗುಂಪು ಪೋಲಿಸ್ ಠಾಣೆಗೂ ಬೆಂಕಿ ಹಚ್ಚಿತ್ತು.

ಪೋಲಿಸರು ತಿಳಿಸಿರುವಂತೆ ಹಿಂಸಾಚಾರದಲ್ಲಿ ಆರು ಗಲಭೆಕೋರರು ಕೊಲ್ಲಲ್ಪಟ್ಟದ್ದು,ಪೋಲಿಸ್ ಸಿಬ್ಬಂದಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಹಿಂಸಾಚಾರದ ಬಳಿಕ ಬನಭೂಲ್ಪುರದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಈಗಾಗಲೇ ಪಟ್ಟಣದ ಹೊರವಲಯಗಳಲ್ಲಿ ಹಿಂದೆಗೆದುಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News