×
Ad

ಉತ್ತರಾಖಂಡದಲ್ಲಿ ಏರುಗತಿಯಲ್ಲಿರುವ ಕೋಮು ಉದ್ವಿಗ್ನತೆಯ ಫಲಶ್ರುತಿಯೇ ಹಲ್ದ್ವಾನಿ ಹಿಂಸಾಚಾರ

Update: 2024-02-15 21:21 IST

Photo: PTI

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಸ್ಫೋಟಗೊಂಡ ಕೋಮು ಹಿಂಸಾಚಾರದ ಕುರಿತು ತನಿಖೆ ನಡೆಸಲು ನಡೆಸಲು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಹಾಗೂ ಕಾರವಾನ್ ಇ-ಮೊಹಬ್ಬತ್ ನ ಸದಸ್ಯರು ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತ ಝಹೀದ್ ಖಾದ್ರಿ ಅವರನ್ನೊಳಗೊಂಡ ನಾಗರಿಕ ಸತ್ಯಶೋಧನಾ ತಂಡವು ಫೆಬ್ರವರಿ 14ರಂದು ಆ ಪ್ರಾಂತ್ಯಕ್ಕೆ ಭೇಟಿ ನೀಡಿತ್ತು. ತಮ್ಮ ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ನಾಗರಿಕ ಸಂಘಟನೆಗಳ ಸದಸ್ಯರು, ಪತ್ರಕರ್ತರು, ಬರಹಗಾರರು, ವಕೀಲರು ಹಾಗೂ ಕೆಲವು ಸಂತ್ರಸ್ತ ವ್ಯಕ್ತಿಗಳು ಮಾತನಾಡಿದರು. ಇತ್ತೀಚೆಗೆ ಸ್ಫೋಟಗೊಂಡ ಹಿಂಸಾಚಾರಕ್ಜೆ ಕಾರಣವಾದ ಘಟನೆಗಳ ಕುರಿತು ಆಘಾತಕಾರಿ ವಿವರಗಳನ್ನು ಅವರು ಮಾತುಕತೆಯ ವೇಳೆ ಬಹಿರಂಗಪಡಿಸಿರುವುದು ಸತ್ಯಶೋಧನಾ ತಂಡದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

► ಕೋಮು ಉದ್ವಿಗ್ನತೆ ಹಾಗೂ ಧ್ರುವೀಕರಣ

ಫೆಬ್ರವರಿ 8, 2024ರಂದು ಹಲ್ದ್ವಾನಿಯ ಬಂಭಲ್ಪುರದಲ್ಲಿ ನಡೆದ ಕೋಮು ಹಿಂಸಾಚಾರದ ಘಟನೆಯು ದಿಢೀರನೆ ಘಟಿಸಿರುವುದಲ್ಲ; ಬದಲಿಗೆ ಹಲವಾರು ವರ್ಷಗಳಿಂದ ಉತ್ತರಾಖಂಡದಲ್ಲಿ ಸ್ಥಿರವಾಗಿ ಏರಿಕೆಯಾಗುತ್ತಿರುವ ಕೋಮು ಉದ್ವಿಗ್ನತೆಯಿಂದ ಸಂಭವಿಸಿದ್ದು ಎಂದು ಸತ್ಯಶೋಧನಾ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಧಾಮಿ ಹಾಗೂ ಕೆಲವು ಬಲಪಂಥೀಯ ಗುಂಪುಗಳು ಸಮಾಜ ವಿರೋಧಿ ಶಕ್ತಿಗಳೊಂದಿಗೆ ಸೇರಿ ಭಾರಿ ಪ್ರಮಾಣದ ಕೋಮು ಧ್ರುವೀಕರಣದಲ್ಲಿ ತೊಡಗಿವೆ. ಮುಸ್ಲಿಮರ ಮೇಲಿನ ಜಿಹಾದ್ ಆರೋಪಗಳು, ಮುಸ್ಲಿಮರಿಗೆ ಆರ್ಥಿಕ ಹಾಗೂ ಸಾಮಾಜಿಕ ಬಹಿಷ್ಕಾರ ಹಾಗೂ ಅವರಿಗೆ ಸೇರಿದ ಸ್ಥಳಗಳ ನೆಲಸಮ ಕಾರ್ಯಾಚರಣೆ ಮಾಡುವ ಬೆದರಿಕೆಗಳು ಕೋಮು ಧ್ರುವೀಕರಣದ ಭಾಗವಾಗಿದೆ.

► ವ್ಯಾಜ್ಯಗಳು ಹಾಗೂ ತೆರವು ನೋಟಿಸ್

ಹಲ್ದ್ವಾನಿ ಹಿಂಸಾಚಾರ ಘಟನೆ ನಡೆಯುವುದಕ್ಕೂ ಮುನ್ನ, ಗಮನಾರ್ಹ ಸಂಖ್ಯೆಯ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಹಲ್ದ್ವಾನಿಯಲ್ಲಿ ಲಘು ಪ್ರಮಾಣದ ಕೋಮು ಸಂಘರ್ಷ ಹಾಗೂ ವ್ಯಾಜ್ಯ ನಡೆದಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಅತಿಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂಬ ಭಾರತೀಯ ರೈಲ್ವೆ ಇಲಾಖೆಯ ವಾದವು ಸುದೀರ್ಘ ಕಾಲದ ವ್ಯಾಜ್ಯಕ್ಕೆ ಕಾರಣವಾಗಿದೆ. ಈ ಜಾಗದಲ್ಲಿ ಮುಸ್ಲಿಂ ನಿವಾಸಿಗಳು ವಾಸಿಸುತ್ತಿದ್ದಾರೆ. ಇದಲ್ಲದೆ, ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿನ ನಗರ ಭಾಗದ ಜಮೀನಿನ ಕಾನೂನಾತ್ಮಕ ಮಾಲಕತ್ವದ ಕುರಿತೂ ವ್ಯಾಜ್ಯಗಳು ಉದ್ಭವಿಸಿವೆ. ಇತ್ತೀಚಿನ ಹಿಂಸಾಚಾರಕ್ಕೆ ದಿಢೀರ್ ಕಾರಣವೆಂದರೆ, ಸೋಫಿಯಾ ಮಲಿಕ್ ತಮ್ಮ ಮಾಲಕತ್ವದ್ದೆಂದು ಪ್ರತಿಪಾದಿಸುತ್ತಿರುವ ಆರು ಎಕರೆ ಜಮೀನನ್ನು ರಾಜ್ಯ ಸರ್ಕಾರವು ನಝುಲ್ ಜಮೀನು ಎಂದು ವಾದಿಸುತ್ತಿರುವುದು.

► ಹಿಂಸಾಚಾರಕ್ಕೆ ತಿರುಗಿದ ಶಾಂತಿ ನಿರ್ಣಯ

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಫೆಬ್ರವರಿ 8ರ ಸಂಜೆ ಬೀಗ ಮುದ್ರೆ ಹಾಕಿರುವ ಮಸೀದಿ ಹಾಗೂ ಮದ್ರಸಾವನ್ನು ನೆಲಸಮಗೊಳಿಸಲು ಪೊಲೀಸ್ ಭದ್ರತೆಯೊಂದಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸುವವರೆಗೂ ಈ ಪ್ರದೇಶ ಶಾಂತಿಯುತವಾಗಿಯೇ ಇತ್ತು. ನೆಲಸಮ ಕಾರ್ಯಾಚರಣೆಯ ವಿರುದ್ಧ, ವಿಶೇಷವಾಗಿ ಬುಲ್ಡೋಝರ್ಗಳಿಗೆ ಅಡ್ಡ ನಿಂತ ಮಹಿಳೆಯರನ್ನು ಬಲವಂತವಾಗಿ ತೆರವುಗೊಳಿಸಿ, ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದಾಗ ಸ್ಥಳೀಯ ನಿವಾಸಿಗಳ ಆಕ್ರೋಶ ಸ್ಫೋಟಗೊಂಡಿತು. ನೆಲಸಮ ಕಾರ್ಯಾಚರಣೆಗೂ ಮುನ್ನ ಪವಿತ್ರ ವಸ್ತುಗಳನ್ನು ಹಸ್ತಾಂತರಿಸಲು ನಿರಾಕರಿಸಿದ್ದು ಸಮಯದಾಯದ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿಯಿತು. ತೀವ್ರ ಸ್ವರೂಪದ ಹಿಂಸಾಚಾರದಲ್ಲಿ ಎರಡೂ ಬದಿಯಿಂದ ಕಲ್ಲೆಸೆತ ನಡೆದಿದ್ದರಿಂದ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಗಾಯಗೊಂಡರು ಹಾಗೂ ಸ್ಥಳದಲ್ಲಿ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು.

► ಸ್ಫೋಟಗೊಂಡ ಹಿಂಸಾಚಾರ ಹಾಗೂ ಪೊಲೀಸರ ಪ್ರತಿಕ್ರಿಯೆ

ಕ್ಷಿಪ್ರವಾಗಿ ಹಬ್ಬಿದ ಹಿಂಸಾಚಾರದಿಂದಾಗಿ ಜನರ ಗುಂಪು ಪೊಲೀಸ್ ಠಾಣೆ ಬಳಿಯಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. ಇದರಿಂದಾಗಿ ಪೊಲೀಸ್ ಠಾಣೆಯ ಕೆಲ ಭಾಗಕ್ಕೂ ಬೆಂಕಿ ಹರಡಿತು. ಇದಕ್ಕೆ ಪ್ರತಿಯಾಗಿ ಲಘು ಲಾಠಿ ಪ್ರಹಾರ ನಡೆಸಿದ ನಂತರ ಅಂತಿಮವಾಗಿ ಬಳಸಲು ಇರುವ ಆಯ್ಕೆಯಾದ ಗುಂಡಿನ ದಾಳಿಗೆ ಪೊಲೀಸರು ಮುಂದಾದರು. ಗುಂಡಿನ ದಾಳಿ ಯಾವಾಗ ಪ್ರಾರಂಭಗೊಂಡಿತು ಹಾಗೂ ಕಂಡಲ್ಲಿ ಗುಂಡಿಕ್ಕಲು ಯಾವಾಗ ಆದೇಶಿಸಲಾಯಿತು ಎಂಬ ಬಗ್ಗೆ ವಿರೋಧಾಭಾಸದ ವರದಿಗಳಿವೆ. ಆದರೆ, ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ಪ್ರತಿಪಾದಿಸಿದರೆ, ಅದಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿರಬಹುದು ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಇದರೊಂದಿಗೆ ಸುದೀರ್ಘ ಕಾಲದ ಕರ್ಫ್ಯೂ ಹೇರಿಕೆ ಮತ್ತು ಅಂತರ್ಜಾಲ ಸೇವೆ ಸ್ಥಗಿತ ಕೂಡಾ ಪರಿಸ್ಥಿತಿಯನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸಿತು ಹಾಗೂ ಸಂತ್ರಸ್ತ ಸಮುದಾಯದ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿತು ಎಂದು ವರದಿಯಲ್ಲಿ ಹೇಳಲಾಗಿದೆ.

► ವ್ಯಾಪಕ ಶೋಧ ಕಾರ್ಯಾಚರಣೆ ಹಾಗೂ ಪೊಲೀಸರ ಅಮಾನುಷತೆ

ವರದಿಗಳ ಪ್ರಕಾರ, ಅಂದಾಜು 300 ಮನೆಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸ್ಥಳೀಯ ನಿವಾಸಿಗಳ ಮೇಲೆ ಹಲ್ಲೆ ನಡೆಸಿ, ಸ್ವತ್ತುಗಳಿಗೆ ಹಾನಿಯೆಸಗಿದರು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಯುವಕರು, ಮಹಿಳೆಯರು, ಅಪ್ರಾಪ್ತರು ಸೇರಿದಂತೆ ಅಸಂಖ್ಯಾತ ಸ್ಥಳೀಯ ನಿವಾಸಿಗಳನ್ನು ವಶಕ್ಕೆ ಪಡೆದು, ವಿಚಾರಣೆಗಾಗಿ ಗೋಪ್ಯ ಸ್ಥಳಕ್ಕೆ ಕರೆದೊಯ್ಯಲಾಯಿತು. ಇದರೊಂದಿಗೆ, ಅಂತರ್ಜಾಲ ಸೇವೆ ಸ್ಥಗಿತಗೊಳಿಸಿದ್ದರಿಂದ ಸ್ಥಳೀಯ ನಿವಾಸಿಗಳು ಧ್ವಂಸ ಮತ್ತು ಹಲ್ಲೆಯ ಆರೋಪಿತ ಘಟನೆಗಳ ಕುರಿತು ತಮ್ಮ ಆತಂಕಗಳನ್ನು ಹೊರಗೆಡವಲು ಸಾಧ್ಯವಾಗದೆ ಹೋಗಿದ್ದರಿಂದ ಈ ಪ್ರದೇಶದಲ್ಲಿ ಮತ್ತಷ್ಟು ಪ್ರಕ್ಷುಬ್ಧತೆ ಮನೆ ಮಾಡಿತು ಎಂದು ವರದಿಯಲ್ಲಿ ಹೇಳಲಾಗಿದೆ.

“ಸುಮಾರು 300 ನಿವಾಸಗಳನ್ನು ಪ್ರವೇಶಿಸಿ ವ್ಯಾಪಕ ಶೋಧ ಕಾರ್ಯ ನಡೆಸಿದ ಪೊಲೀಸರು, ಮನೆಯಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸ್ಥಳೀಯ ನಿವಾಸಿಗಳ ಮೇಲೆ ಹಲ್ಲೆ ನಡೆಸಿದರು. ಮನೆಯ ಹೊರಗೆ ನಿಲ್ಲಿಸಿದ್ದ ವಾಹನಗಳು ಸೇರಿದಂತೆ ಸ್ಥಳೀಯರ ಆಸ್ತಿಪಾಸಿಗೆ ಹಾನಿಯೆಸಗಿದರು ಎಂದು ಕಾರವಾನ್ ತಂಡಕ್ಕೆ ಸ್ಥಳೀಯ ಪತ್ರಕರ್ತರು, ನಾಗರಿಕ ಸಂಘಟನೆಗಳ ಹಿರಿಯ ಸದಸ್ಯರು, ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದರು. ಹಲ್ಲೆಯೆಸಗಿದ ಯುವಕರು, ಕೆಲವು ಮಹಿಳೆಯರು ಹಾಗೂ ಅಪ್ರಾಪ್ತರನ್ನು ವಶಕ್ಜೆ ಪಡೆದ ಪೊಲೀಸರು, ಅವರನ್ನು ವಿಚಾರಣೆಗಾಗಿ ಗೋಪ್ಯ ಸ್ಥಳಕ್ಕೆ ಕರೆದೊಯ್ದರು. ಇದರಿಂದ ಇಡೀ ಪ್ರದೇಶದಲ್ಲಿ ಭೀತಿ ಮತ್ತು ಆತಂಕ ಅವರಿಸಿತು. ಇದರೊಂದಿಗೆ, ನಾವು ಸ್ಥಳಕ್ಕೆ ಭೇಟಿ ನೀಡಿದ ದಿನದವರೆಗೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿದ್ದುದರಿಂದ ಹಾಗೂ ಕಠಿಣ ಕರ್ಫ್ಯೂವನ್ನು ಹೇರಿದ್ದುದರಿಂದ ಸ್ಥಳೀಯರು ತಮ್ಮ ಭಯ, ಆತಂಕ, ಕಳವಳ ಹಾಗೂ ಸಮಸ್ಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಧ್ವಂಸ ಮತ್ತು ಹಲ್ಲೆಯ ಘಟನೆಗಳನ್ನು ವರದಿ ಮಾಡಲಾಗಲಿಲ್ಲ" ಎಂದು ಹೇಳುವ ಮೂಲಕ ವರದಿಯು ಮುಕ್ತಾಯಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News