ಉತ್ತರ ಪ್ರದೇಶ | ಜನರೇಟರ್‌ಗೆ ಡೀಸೆಲ್ ಅಲಭ್ಯ: ವಿದ್ಯುಚ್ಛಕ್ತಿ ಕಡಿತದಿಂದ ಡಯಾಲಿಸ್ ಗೊಳಗಾಗುತ್ತಿದ್ದ ರೋಗಿಯ ಮೃತ್ಯು
ಸಾಂದರ್ಭಿಕ ಚಿತ್ರ
ಬಿಜ್ನೋರ್: ಬಿಜ್ನೋರ್ ಜಿಲ್ಲಾಸ್ಪತ್ರೆಯಲ್ಲಿ ಅಧಿಕೃತ ತಪಾಸಣಾ ಕಾರ್ಯ ಪ್ರಗತಿಯಲ್ಲಿದ್ದರೂ, ಆಸ್ಪತ್ರೆಯ ಜನರೇಟರ್ ನಲ್ಲಿ ಇಂಧನ ಇಲ್ಲದೆ ಇದ್ದುದರಿಂದ ಹಾಗೂ ವಿದ್ಯುತ್ ಕಡಿತವಾಗಿದ್ದರಿಂದ, ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ಮೂತ್ರಪಿಂಡ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಫೂಲ್ಸಂದ ಗ್ರಾಮದ 26 ವರ್ಷದ ಸರ್ಫರಾಝ್ ಅಹ್ಮದ್ ಎಂಬುವವರು ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತಿದ್ದಾಗ ವಿದ್ಯುತ್ ಕಡಿತವುಂಟಾಗಿದೆ. ಆದರೆ, ಗುತ್ತಿಗೆ ಪಡೆದಿದ್ದ ಸಂಸ್ಥೆಯು ಜನರೇಟರ್ ಗೆ ಡೀಸೆಲ್ ಪೂರೈಕೆ ಮಾಡದೆ ಇದ್ದುದರಿಂದ, ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಈ ಘಟನೆ ನಡೆದಾಗ, ಆಸ್ಪತ್ರೆಯ ತಪಾಸಣಾ ಕಾರ್ಯ ನಡೆಸುತ್ತಿದ್ದ ಸಿಡಿಒ ಪೂರ್ಣ ಬೊಹ್ರಾರ ಕಣ್ಣಿಗೆ ಇನ್ನೂ ಐವರು ರೋಗಿಗಳು ವಿದ್ಯುತ್, ದೀಪಗಳು ಹಾಗೂ ಫ್ಯಾನ್ ಗಳಿಲ್ಲದೆ ಮಲಗಿಕೊಂಡಿರುವ ದೃಶ್ಯ ಬಿದ್ದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸರ್ಫರಾಝ್ ತಾಯಿ, "ವಿದ್ಯುತ್ ಕಡಿತವಾದಾಗ, ಯಂತ್ರವು ಅರ್ಧದಲ್ಲೇ ತನ್ನ ಕೆಲಸವನ್ನು ಸ್ಥಗಿತಗೊಳಿಸಿದ್ದರಿಂದ, ನನ್ನ ಪುತ್ರನ ಬಹುತೇಕ ಅರ್ಧದಷ್ಟು ರಕ್ತ ಯಂತ್ರದೊಳಗೇ ಉಳಿದು ಹೋಯಿತು" ಎಂದು ಅಳಲು ತೋಡಿಕೊಂಡಿದ್ದಾರೆ.
"ನಾನು ಜನರೇಟರ್ ಅನ್ನು ಚಲಾಯಿಸುವಂತೆ ಆಸ್ಪತ್ರೆಯ ಸಿಬ್ಬಂದಿಗಳ ಬಳಿ ಮನವಿ ಮಾಡಿದೆ. ಆದರೆ, ಯಾರೂ ನನಗೆ ನೆರವು ನೀಡಲಿಲ್ಲ. ಇದರ ಬೆನ್ನಿಗೇ ನನ್ನ ಪುತ್ರ ಮೃತಪಟ್ಟ" ಎಂದೂ ಅವರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ವೈದ್ಯಕೀಯ ತಜ್ಞರು ಅಲ್ಲಗಳೆದಿದ್ದಾರೆ.
ಈ ನಡುವೆ, 2020ರಿಂದ ಖಾಸಗಿ ಸಂಸ್ಥೆಯಾದ ಸಂಜೀವನಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಜನರೇಟರ್ ಘಟಕವನ್ನು ನಿರ್ವಹಿಸುತ್ತಿದ್ದು, ಅದು ಪದೇ ಪದೇ ಡೀಸೆಲ್ ಪೂರೈಕೆಯಲ್ಲಿ ವಿಫಲಗೊಂಡಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ದೂಷಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ, ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದ ಜಿಲ್ಲಾಧಿಕಾರಿ ಜಸ್ಜಿತ್ ಕೌರ್, "ಜನರೇಟರ್ ಘಟಕವನ್ನು ಕೆಟ್ಟದಾಗಿ ನಿರ್ವಹಿಸಲಾಗಿದೆ ಹಾಗೂ ಅಲ್ಲಿ ಸ್ವಚ್ಛತೆಯನ್ನು ಕಾಪಾಡಲಾಗಿಲ್ಲ. ಸಂಸ್ಥೆಯ ವಿರುದ್ಧ ದೂರು ದಾಖಲಿಸಲಾಗುವುದು. ಇದರೊಂದಿಗೆ, ಅದನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು" ಎಂದು ಭರವಸೆ ನೀಡಿದ್ದಾರೆ.