×
Ad

ದ್ವೇಷ ಭಾಷಣ: ಸಮಾಜವಾದಿ ಪಕ್ಷದ ನಾಯಕ ಅಝಮ್ ಖಾನ್ ಗೆ 2 ವರ್ಷ ಜೈಲು ಶಿಕ್ಷೆ

Update: 2023-07-15 22:28 IST

ಅಝಮ್ ಖಾನ್ | Photo: PTI

ಲಕ್ನೋ: ದ್ವೇಷದ ಮಾತುಗಳನ್ನು ಆಡಿದ ಪ್ರಕರಣವೊಂದರಲ್ಲಿ, ಸಮಾಜವಾದಿ ಪಕ್ಷದ ನಾಯಕ ಅಝಮ್ ಖಾನ್ ದೋಷಿ ಎಂಬುದಾಗಿ ರಾಮ್ಪುರದ ನ್ಯಾಯಾಲಯವೊಂದು ಶನಿವಾರ ಘೋಷಿಸಿದೆ ಮತ್ತು ಅವರಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಅವರು ದ್ವೇಷದ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿ 2019ರಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.

ಅಝಮ್ ಖಾನ್ ಭಾಷಣದ ವೀಡಿಯೊ ವೈರಲ್ ಆಗಿತ್ತು. ಅದರ ಆಧಾರದಲ್ಲಿ, ರಾಮ್ಪುರದ ಜಿಲ್ಲಾ ಸಹಾಯಕ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಚೌಹಾಣ್ ದೂರು ಸಲ್ಲಿಸಿದ್ದರು. ಅಝಮ್ ಖಾನ್ ತನ್ನ ಭಾಷಣದಲ್ಲಿ ರಾಮ್ಪುರದ ಜಿಲ್ಲಾಧಿಕಾರಿ ಆಂಜನೇಯ ಕುಮಾರ್ ಸಿಂಗ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದ್ವೇಷ ಮಾತುಗಳನ್ನು ಆಡಿದ ಪ್ರಕರಣವೊಂದರಲ್ಲಿ ಖಾನ್ ಶಿಕ್ಷೆಗೊಳಗಾಗಿರುವುದು ಇದೇ ಮೊದಲಲ್ಲ. ಇಂಥದೇ ಇನ್ನೊಂದು ಪ್ರಕರಣದಲ್ಲಿ, ಕಳೆದ ವರ್ಷ ಎಮ್ಪಿ-ಎಮ್ಎಲ್ಎ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ಅಝಮ್ ಖಾನ್ಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು. ಇದರಿಂದಾಗಿ ಅವರ ಉತ್ತರಪ್ರದೇಶ ವಿಧಾನಸಭಾ ಸದಸ್ಯತ್ವ ರದ್ದಾಗಿತ್ತು.

ಬಳಿಕ, ರಾಮ್ಪುರದ ಸೆಶನ್ಸ್ ನ್ಯಾಯಾಲಯವೊಂದು ಈ ವರ್ಷದ ಮೇ ತಿಂಗಳಲ್ಲಿ ಈ ಶಿಕ್ಷೆಯನ್ನು ರದ್ದುಗೊಳಿಸಿ, ಖಾನ್ರನ್ನು ದೋಷಮುಕ್ತಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News