×
Ad

ಭಾರತಕ್ಕೆ ಸೇವೆ ಸಲ್ಲಿಸಲು ಅವರಿಗೆ ಹಲವು ಅವಕಾಶಗಳು ಸಿಕ್ಕಿವೆ: ಜಗದೀಪ್ ಧನ್ಕರ್ ಕುರಿತು ಪ್ರಧಾನಿ ಮೋದಿ

Update: 2025-07-22 13:31 IST

ಪ್ರಧಾನಿ ನರೇಂದ್ರ ಮೋದಿ ಮತ್ತು ಜಗದೀಪ್ ಧನ್ಕರ್ (Photo: PTI)

ಹೊಸದಿಲ್ಲಿ: "ವಿವಿಧ ಹುದ್ದೆಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ಧನ್ಕರ್ ಅವರಿಗೆ ಹಲವು ಅವಕಾಶಗಳು ಸಿಕ್ಕಿವೆ", ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಆರೋಗ್ಯ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ಮೋದಿಯವರ ಈ ಹೇಳಿಕೆ ಬಂದಿದೆ.

ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, " ಜಗದೀಪ್ ಧನ್ಕರ್ ಅವರಿಗೆ ಭಾರತದ ಉಪರಾಷ್ಟ್ರಪತಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಹಲವು ಅವಕಾಶಗಳು ಸಿಕ್ಕಿವೆ. ಅವರಿಗೆ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸೋಮವಾರ ಸಂಜೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಹಠಾತ್ ರಾಜೀನಾಮೆ ರಾಜಕೀಯ ವಲಯಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ, ವೈದ್ಯಕೀಯ ಸಲಹೆಗೆ ಅನುಗುಣವಾಗಿ ಆರೋಗ್ಯಕ್ಕೆ ಆದ್ಯತೆ ನೀಡಲು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಧನ್ಕರ್ ಅವರು ತಿಳಿಸಿದ್ದರು.

"ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣವೇ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ" ಎಂದು ಧನ್ಕರ್ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಬರೆದಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನ್ಕರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ರಾಷ್ಟ್ರಪತಿ ಭವನವು ಅದನ್ನು ಅಧಿಕೃತ ಅಧಿಸೂಚನೆಗಾಗಿ ಗೃಹ ಸಚಿವಾಲಯಕ್ಕೆ ಕಳುಹಿಸಿದೆ.

ಧನ್ಕರ್ ಅವರು ಆಗಸ್ಟ್ 2022 ರಲ್ಲಿ ಭಾರತದ 14 ನೇ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಆಗಸ್ಟ್ 2027 ರವರೆಗೆ ಐದು ವರ್ಷಗಳ ಅವಧಿಗೆ ಅವರು ಸೇವೆ ಸಲ್ಲಿಸುವ ನಿರೀಕ್ಷೆಯಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News