×
Ad

ಉತ್ತರ ಪ್ರದೇಶ | ಶಾಲೆಗೆ ತೆರಳುತ್ತಿದ್ದ ದಲಿತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಆರೋಪ : ಹೆಡ್ ಕಾನ್ಸ್ಟೇಬಲ್ ಬಂಧನ

Update: 2025-07-05 15:30 IST

ಸಾಂದರ್ಭಿಕ ಚಿತ್ರ (PTI)

ಲಕ್ನೋ : ಉತ್ತರ ಪ್ರದೇಶದ ಫತೇಘರ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ದಲಿತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸರು ಹೆಡ್ ಕಾನ್ಸ್ಟೇಬಲ್ ಓರ್ವನನ್ನು ಬಂಧಿಸಿದ್ದಾರೆ.

ವಿನಯ್ ಚೌಹಾಣ್ ಬಂಧಿತ ಆರೋಪಿ. ಕೃತ್ಯದ ಬಳಿಕ ಸಂತ್ರಸ್ತೆಯನ್ನು ಆಕೆಯ ಮನೆಯ ಬಳಿ ಕರೆತಂದು ಕಾರಿನಿಂದ ಹೊರಗೆ ತಳ್ಳುತ್ತಿದ್ದಾಗ ಸ್ಥಳೀಯರು ವಿನಯ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಚೌಹಾಣ್ ಈ ಕುರಿತು ಪ್ರತಿಕ್ರಿಯಿಸಿ, ಆರೋಪಿ ವಿನಯ್ ಚೌಹಾಣ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಇಲಾಖಾ ತನಿಖೆ ಕೂಡ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಚೌಹಾಣ್ ಬಾಲಕಿ ಜೊತೆ ಫೋನ್ ಮೂಲಕ ಸಂಪರ್ಕದಲ್ಲಿದ್ದ. ಬಾಲಕಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಾಳೆ, ಮ್ಯಾಜಿಸ್ಟ್ರೇಟ್‌ ಮುಂದೆ ನೀಡಿದ ಹೇಳಿಕೆಯಲ್ಲಿ ಆರೋಪಿಯ ಪರವಾಗಿ ಹೇಳಿಕೆ ನೀಡಿದ್ದಾಳೆ.

ʼಜುಲೈ 2ರಂದು ನನ್ನ ಮಗಳು ಶಾಲೆಗೆ ಹೋಗುವಾಗ ಆಕೆಯನ್ನು ವಿನಯ್‌ ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ್ದಾನೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಆಕೆಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಅಪಹರಣದ ಬಗ್ಗೆ ಮಾಹಿತಿ ತಿಳಿದು ನನ್ನ ಮಗ ಮತ್ತು ಇತರರು ಬಾಲಕಿಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಮನೆ ಬಳಿ ಕರೆತಂದು ಬಾಲಕಿಯನ್ನು ಕಾರಿನಿಂದ ಹೊರಗೆ ತಳ್ಳುವುದನ್ನು ನೋಡಿದ ಸ್ಥಳೀಯರು ಬೈಕ್‌ನಲ್ಲಿ ಕಾರನ್ನು ಬೆನ್ನು ಹತ್ತಿದ್ದಾರೆ. ಈ ವೇಳೆ ಚಾಲಕ ಕಾರನ್ನು ಬಿಟ್ಟು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಸಾರ್ವಜನಿಕರು ವಿನಯ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆʼ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಬಾಲಕಿಯ ತಂದೆಯ ದೂರಿನ ಮೇರೆಗೆ ವಿನಯ್ ಮತ್ತು ಆತನ ಸಹಚರನ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News