"ಸಾವಿಗೆ ಸಬ್ಸಿಡಿ": ಬೀಡಿಗಳ ಮೇಲೆ ಜಿಎಸ್‌ಟಿ ಕಡಿತಕ್ಕೆ ಆರೋಗ್ಯತಜ್ಞರ ಕಳವಳ; ಏಕರೂಪ ತೆರಿಗೆಗೆ ಆಗ್ರಹ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಇತರ ತಂಬಾಕು ಉತ್ಪನ್ನಗಳಿಗೆ ಶೇ.40ರ ನಿಗದಿಗೊಳಿಸಿದ್ದರೂ, ಬೀಡಿಗಳ ಮೇಲಿನ ಜಿಎಸ್‌ಟಿಯನ್ನು ಶೇ.28ರಿಂದ ಶೇ.18ಕ್ಕೆ ತಗ್ಗಿಸುವ ಸರಕಾರದ ನಿರ್ಧಾರದ ಬಗ್ಗೆ ಆರೋಗ್ಯ ತಜ್ಞರು ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಬಡ ಮತ್ತು ದುರ್ಬಲ ಸಮುದಾಯಗಳಲ್ಲಿ ಅಗ್ಗದ ಬೀಡಿಗಳ ಬಳಕೆ ಹೆಚ್ಚಾಗಬಹುದು ಮತ್ತು ಇದು ದೇಶದ ತಂಬಾಕು ಸಂಬಂಧಿತ ರೋಗಗಳ ಹೊರೆಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೆ ಇಂಡಿಯಾ 2016-17ರ ಪ್ರಕಾರ ಬೀಡಿ ಜನರು ಹೆಚ್ಚಾಗಿ ಸೇದುವ ತಂಬಾಕು ಉತ್ಪನ್ನವಾಗಿದ್ದು, ಭಾರತದಲ್ಲಿ ಏಳು ಕೋಟಿಗೂ ಅಧಿಕ ಜನರು ಬಳಸುತ್ತಾರೆ. ಬಡವರು ಹೆಚ್ಚಾಗಿ ಸೇದುವ ಬೀಡಿಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿವೆ. ಈ ತೆರಿಗೆ ಅಸಮಾನತೆಯು ಬೀಡಿಗಳನ್ನು ಅಗ್ಗದ ಬೆಲೆಗಳಲ್ಲಿ ಲಭ್ಯವಾಗಿಸುತ್ತದೆ. ಇದರಿಂದಾಗಿ ಬೀಡಿಯ ಬಳಕೆ ಹೆಚ್ಚಾಗಲಿದ್ದು, ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ತೆರಿಗೆ ಕಡಿತವು ಬಡವರ ‘ಸಾವಿಗೆ ಸಬ್ಸಿಡಿ’ಯಾಗಲಿದೆ ಎಂದು ಎಂದು ಖ್ಯಾತ ಕ್ಯಾನ್ಸರ್ ತಜ್ಞ ಹಾಗೂ ವಿಶ್ವ
ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಪಾಲುದಾರರಿಂದ ಜಾಗತಿಕ ತಂಬಾಕು ನಿಯಂತ್ರಣಕ್ಕಾಗಿ ಜ್ಯೂಡಿ ವಿಲೆನ್‌ಫೀಲ್ಡ್ ಪ್ರಶಸ್ತಿಗೆ ಭಾಜನರಾಗಿರುವ ಡಾ.ವಿಶಾಲ ರಾವ್ ಹೇಳಿದರು.
ಬೀಡಿಗಳ ಮೇಲಿನ ಜಿಎಸ್‌ಟಿಯನ್ನು ಶೇ.18ಕ್ಕೆ ಇಳಿಸಿ ಇತರ ತಂಬಾಕು ಉತ್ಪನ್ನಗಳಿಗೆ ಶೇ.40ರಷ್ಟು ತೆರಿಗೆಯನ್ನು ನಿಗದಿಗೊಳಿಸಿರುವ ಸರಕಾರದ ನಿರ್ಧಾರವು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಕ್ರಮವಾಗಿದೆ. ಬಳಕೆಯನ್ನು ತಡೆಯಲು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಏಕರೂಪವಾಗಿ ಹೆಚ್ಚಿನ ತೆರಿಗೆಯನ್ನು ವಿಧಿಸುವುದು ಮುಖ್ಯವಾಗಿದೆ ಎಂದರು.
ಬೀಡಿ ಸೇವನೆಯಿಂದ ಅಪಾಯಗಳನ್ನು ಎತ್ತಿ ತೋರಿಸಿದ ಏಮ್ಸ್ ದಿಲ್ಲಿಯ ಸಾರ್ವಜನಿಕ ಆರೋಗ್ಯ ತಜ್ಞೆ ಮತ್ತು ಸಂಧಿವಾತ ವಿಭಾಗದ ಮುಖ್ಯಸ್ಥೆ ಡಾ.ಉಮಾ ಕುಮಾರ ಅವರು,ಹೆಚ್ಚಿನ ತೆರಿಗೆಯು ತಂಬಾಕು ಉತ್ಪನ್ನಗಳನ್ನು ದುಬಾರಿಯಾಗಿಸುವ ಮೂಲಕ ಅವುಗಳ ಬಳಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ ಎನ್ನುವುದನ್ನು ಪುರಾವೆಗಳು ಸ್ಪಷ್ಟವಾಗಿ ತೋರಿಸಿವೆ ಎಂದು ಹೇಳಿದರು.
ಬೀಡಿಯಂತಹ ಮಾರಣಾಂತಿಕ ಉತ್ಪನ್ನಗಳನ್ನು ಅಗ್ಗವಾಗಿಸುವುದನ್ನು ಯಾವುದೇ ಆರೋಗ್ಯ ಅಥವಾ ಆರ್ಥಿಕ ತಜ್ಞರು ಬೆಂಬಲಿಸುವುದಿಲ್ಲ ಎಂದು ಆರೋಗ್ಯ ಸೇವೆಗಳ ಮಾಜಿ ಮಹಾನಿರ್ದೇಶಕ ಡಾ.ಜಗದೀಶ ಪ್ರಸಾದ ಹೇಳಿದರು.
ತಂಬಾಕು ಸಂಬಂಧಿತ ಕಾಯಿಲೆಗಳಿಂದಾಗಿ ದೇಶವು ವೈದ್ಯಕೀಯ ವೆಚ್ಚಗಳು ಮತ್ತು ಉತ್ಪಾದನೆ ನಷ್ಟದ ರೂಪದಲ್ಲಿ ವಾರ್ಷಿಕ 1.77 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಆರ್ಥಿಕ ಹೊರೆಯನ್ನು ಎದುರಿಸುತ್ತಿದೆ. ಬಡ ಕುಟುಂಬಗಳು ಇದರ ಅತ್ಯಂತ ಹೆಚ್ಚಿನ ಹೊರೆಯನ್ನು ಎದುರಿಸುತ್ತಿದ್ದು,ಬೀಡಿಗಳನ್ನು ಅಗ್ಗವಾಗಿಸಿರುವುದು ಈ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಲಿದೆ.