×
Ad

45ಕ್ಕಿಂತ ಕೆಳ ವಯಸ್ಸಿನವರನ್ನು ಬಲಿ ಪಡೆಯುತ್ತಿರುವ ಹೃದ್ರೋಗ: ಅಧ್ಯಯನ ವರದಿ

Update: 2025-12-14 08:51 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದಿಢೀರ(Sudden death)ನೇ ಸಾವಿಗೀಡಾಗುವ ಪ್ರಕರಣಗಳು ಇದೀಗ ವಯೋವೃದ್ಧರಿಗೆ ಮಾತ್ರ ಸೀಮಿತವಾಗಿಲ್ಲ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ಯ ಅಧ್ಯಯನದ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಸಂಭವಿಸಿದ 45 ವರ್ಷಕ್ಕಿಂತ ಕೆಳ ವಯಸ್ಸಿನವರ ದಿಢೀರ್ ಸಾವಿನ ಪ್ರಕರಣಗಳ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಹೃದ್ರೋಗದಿಂದ ಕೊನೆಯುಸಿರೆಳೆದಿದ್ದಾರೆ. ಮೇಲ್ನೋಟಕ್ಕೆ ಆರೋಗ್ಯವಂತರಂತೆ ಕಂಡುಬರುವ ಇಂಥವರು ಯಾವುದೇ ಪೂರ್ವಸೂಚನೆ ಇಲ್ಲದೇ ಮನೆ ಅಥವಾ ಪ್ರಯಾಣದ ವೇಳೆ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ ಎಂದು ಅಧ್ಯಯನ ದೃಢಪಡಿಸಿದೆ.

ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನೆಗಳ ಮಂಡಳಿ(ICMR)ಯ ಯೋಜನೆಯಡಿ 2023ರ ಮೇ ತಿಂಗಳಿನಿಂದ 2024ರ ಎಪ್ರಿಲ್ ವರೆಗಿನ ಪ್ರಕರಣಗಳನ್ನು ವಿಶ್ಲೇಷಿಸಲಾಗಿದೆ.

ಹೊಸದಿಲ್ಲಿಯ ಏಮ್ಸ್ ರೋಗನಿರ್ಣಯ ಶಾಸ್ತ್ರ ಮತ್ತು ವಿಧಿವಿಜ್ಞಾನ ವೈದ್ಯಕೀಯ ವಿಭಾಗಗಳು ಈ ಅಧ್ಯಯನ ಕೈಗೊಂಡಿವೆ. ವಿಶ್ಲೇಷಣೆಗೆ ಒಳಪಟ್ಟ 2214 ಅಟಾಪ್ಸಿಗಳ ಪೈಕಿ 180 ಪ್ರಕರಣಗಳು ಅಂದರೆ ಶೇಕಡ 8.1ರಷ್ಟು ಪ್ರಕರಣಗಳು ದಿಢೀರ್ ಸಾವಿನ ಪ್ರಕರಣಗಳಾಗಿವೆ. ಇದರಲ್ಲಿ 103 ಮಂದಿ ಅಂದರೆ ಶೇಕಡ 57.2ರಷ್ಟು ಮಂದಿ 18-45 ವಯೋಮಿತಿಯವರು. ಸರಾಸರಿ 33.6ರ ವಯಸ್ಸಿನಲ್ಲಿ ಈ ಸಾವು ಸಂಭವಿಸುತ್ತಿದ್ದು, ಪುರುಷರೇ ಅಧಿಕ.

ಹೃದ್ರೋಗ ಸಾವಿಗೆ ಪ್ರಮುಖ ಕಾರಣವಾಗಿದೆ. ಅಧ್ಯಯನ ತಂಡದ ಮುಖ್ಯಸ್ಥ, ಏಮ್ಸ್ ವಿಧಿವಿಜ್ಞಾನ ವೈದ್ಯಕೀಯ ವಿಭಾಗದ ಡಾ.ಸುಧೀರ್ ಗುಪ್ತಾ ಅವರ ಪ್ರಕಾರ, ಯುವಕರ ದಿಢೀರ್ ಸಾವಿನ ಪ್ರಕರಣಗಳಲ್ಲಿ ಶೇಕಡ 42.6ರಷ್ಟು ಹೃದ್ರೋಗಕ್ಕೆ ಸಂಬಂಧಿಸಿವೆ. ಬಹುತೇಕ ಯುವಕರು ಹೃದಯನಾಳ ರೋಗದಿಂದ ಬಳಲುತ್ತಿದ್ದರು. ಸಾಮಾನ್ಯವಾಗಿ ಮೊದಲು ಯಾವುದೇ ರೋಗಲಕ್ಷಣ ಕಾಣಿಸುತ್ತಿಲ್ಲ ಹಾಗೂ ಮಾರಣಾಂತಿಕ ಹೃದ್ರೋಗ ನಿಶ್ಶಬ್ದವಾಗಿಯೇ ಬೆಳೆಯುತ್ತಿದೆ. ನ್ಯುಮೋನಿಯಾ, ಕ್ಷಯದಂಥ ಉಸಿರಾಟದ ತೊಂದರೆಗಳು ಶೇಕಡ 20ರಷ್ಟು ಸಾವಿಗೆ ಕಾರಣವಾಗುತ್ತಿವೆ.

ವಿವರವಾದ ಇಮೇಜಿಂಗ್, ಸಂಪೂರ್ಣ ಅಟಾಪ್ಸಿ ಮತ್ತು ಮೈಕ್ರೋಸ್ಕೋಪಿಕ್ ಪರೀಕ್ಷೆಯ ಹೊರತಾಗಿಯೂ ಶೇಕಡ 20ಕ್ಕಿಂತ ಅಧಿಕ ಸಾವಿನ ಪ್ರಕರಣಗಳಿಗೆ ಕಾರಣ ನಿಖರವಾಗಿ ತಿಳಿದುಬಂದಿಲ್ಲ. ಈ ಋಣಾತ್ಮಕ ಅಟಾಪ್ಸಿ ಪ್ರಕರಣಗಳು ಗುಪ್ತ ಇಲೆಕ್ಟ್ರಾನಿಕ್ ಅಥವಾ ವಂಶಪಾರಂಪರ್ಯ ಹೃದಯ ಸಮಸ್ಯೆಗಳಿಂದ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News