ಹಿಮಾಚಲ ಪ್ರದೇಶ | ನಾಪತ್ತೆಯಾದ 30 ಜನರಿಗಾಗಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ
PC : PTI
ಶಿಮ್ಲಾ: ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಥುನಾಗ್, ಗೋಹರ್ ಹಾಗೂ ಕರಸೋಗ್ ನಲ್ಲಿ ಕಳೆದ ವಾರ ಸಂಭವಿಸಿದ ಮೇಘ ಸ್ಫೋಟ, ದಿಢೀರ್ ನೆರೆ ಹಾಗೂ ಭೂಕುಸಿತಗಳು ಅಪಾರ ಹಾನಿಯನ್ನುಂಟು ಮಾಡಿದ ಬಳಿಕ ನಾಪತ್ತೆಯಾಗಿರುವ 30 ಮಂದಿಯನ್ನು ಪತ್ತೆ ಹಚ್ಚಲು ಡ್ರೋನ್, ಸ್ನಿಫರ್ ನಾಯಿಗಳನ್ನು ಬಳಸಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಆಡಳಿತ ಹಾಗೂ ಸ್ಥಳೀಯರೊಂದಿಗೆ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ, ಇಂಡೋ-ಟಿಬೆಟನ್ ಗಡಿ ಪೊಲೀಸ್ ಹಾಗೂ ಹೋಮ್ ಗಾರ್ಡ್‌ನ ಸುಮಾರು 250ಕ್ಕೂ ಅಧಿಕ ಸಿಬ್ಬಂದಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದಲ್ಲದೆ, 20 ತಂಡಗಳು ಮಾಹಿತಿಯನ್ನು ಕಲೆ ಹಾಕುತ್ತಿವೆ ಹಾಗೂ ದುರ್ಗಮ ಪ್ರದೇಶಗಳಲ್ಲಿ ಪಡಿತರ ಹಾಗೂ ವೈದ್ಯಕೀಯ ಕಿಟ್‌ಗಳನ್ನು ವಿತರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ಸಂತ್ರಸ್ತರಿಗೆ 1,538 ಪಡಿತರ ಕಿಟ್‌ಗಳನ್ನು ವಿತರಿಸಲಾಗಿದೆ ಹಾಗೂ ತತ್‌ಕ್ಷಣದ ಪರಿಹಾರವಾಗಿ 12.44 ಲಕ್ಷ ರೂ. ನೀಡಲಾಗಿದೆ. ಇದಲ್ಲದೆ, ಥುನಾಗ್ ಹಾಗೂ ಜಂಜೈಹಲಿ ಪ್ರದೇಶಕ್ಕೆ ತಲಾ 10 ಲಕ್ಷ ರೂ. ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಪತ್ತಿನಿಂದಾಗಿ ಸುಮಾರು 225 ಮನೆ, 7 ಅಂಗಡಿ, 243 ಜಾನುವಾರು ಕೊಟ್ಟಿಗೆ, 31 ವಾಹನ, 14 ಸೇತುವೆ, ಹಲವು ರಸ್ತೆಗಳು ಹಾನಿಗೀಡಾಗಿವೆ. ಇತ್ತೀಚೆಗಿನ ವರದಿ ಪ್ರಕಾರ ಒಟ್ಟು 215 ಜಾನುವಾರುಗಳು ಸಾವನ್ನಪ್ಪಿವೆ. 494 ಜನರನ್ನು ರಕ್ಷಿಸಲಾಗಿದೆ.
ರವಿವಾರ ಸಂಜೆ ವರೆಗೆ ರಾಜ್ಯದಲ್ಲಿ 243 ರಸ್ತೆಗಳನ್ನು ಮುಚ್ಚಲಾಗಿದೆ, ಅದರಲ್ಲಿ ಮಂಡಿ ಜಿಲ್ಲೆ ಒಂದರಲ್ಲೇ 183 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ ಹಿಮಾಚಲ ಪ್ರದೇಶದಲ್ಲಿ 241 ಟ್ರಾನ್ಸ್‌ಫಾರ್ಮರ್ ಹಾಗೂ 278 ನೀರು ಪೂರೈಕೆ ಯೋಜನೆಗಳು ಹಾನಿಗೀಡಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಸಾಧಾರಣದಿಂದ ಕೂಡಿದ ಲಘು ಮಳೆ ಮುಂದುವರಿದಿದೆ.