×
Ad

ʼಮಿಸ್ ಋಷಿಕೇಶ್ʼ ಸೌಂದರ್ಯ ಸ್ಪರ್ಧೆಯ ʼರಿಹರ್ಸಲ್‌ʼ ಗೆ ಅಡ್ಡಿಪಡಿಸಿದ ಹಿಂದುತ್ವ ಸಂಘಟನೆಯ ಕಾರ್ಯಕರ್ತರು

Update: 2025-10-05 15:19 IST

Screengrab:X/@KumaonJagran

ಋಷಿಕೇಶ್ (ಉತ್ತರಾಖಂಡ): ಮಿಸ್ ಋಷಿಕೇಶ್ ಸೌಂದರ್ಯ ಸ್ಪರ್ಧೆಯ ರಿಹರ್ಸಲ್ ವೇಳೆ ಬಲಪಂಥೀಯ ಸಂಘಟನೆಯಾದ ʼರಾಷ್ಟ್ರೀಯ ಹಿಂದೂ ಶಕ್ತಿʼ ಸಂಘಟನೆ ಸದಸ್ಯರು ಸ್ಥಳಕ್ಕೆ ನುಗ್ಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆ ಶುಕ್ರವಾರ ನಡೆದಿದೆ.

ಈ ಸಂದರ್ಭ ಸಂಘಟನೆಯ ಸದಸ್ಯರು ಈ ಸ್ಪರ್ಧೆ “ಉತ್ತರಾಖಂಡದ ಸಂಸ್ಕೃತಿಗೆ ವಿರುದ್ಧ” ಮತ್ತು “ಸನಾತನ ಧರ್ಮದ ಮೌಲ್ಯಗಳಿಗೆ ಧಕ್ಕೆಯುಂಟುಮಾಡುವಂತಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮೂವರು ಸಂಘಟನೆಯ ಸದಸ್ಯರು ರಿಹರ್ಸಲ್ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದರು. ಸದಸ್ಯರಲ್ಲಿ ಒಬ್ಬರಾದ ರಾಘವ್ ಭಟ್ನಾಗರ್, ಸ್ಪರ್ಧಿಗಳು ಧರಿಸಿದ್ದ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ “ಈ ರೀತಿಯ ಬಟ್ಟೆಗಳನ್ನು ಧರಿಸುವುದು ಉತ್ತರಾಖಂಡದ ಸಂಸ್ಕೃತಿಗೆ ಅವಮಾನ” ಎಂದು ಆಯೋಜಕ ಸಂಸ್ಥೆಯಾದ ಲಯನ್ಸ್ ಕ್ಲಬ್ ರಾಯಲ್ ನಿರ್ದೇಶಕ ಧೀರಜ್ ಮಖಿಜಾ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್ ಗೆ ತಿಳಿಸಿದ್ದಾರೆ.

ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಭಟ್ನಾಗರ್ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಹಾಗೂ “ಸಂಸ್ಕೃತಿಗೆ ವಿರುದ್ಧವಾದ ಉಡುಪು” ಕುರಿತು ವಾಗ್ವಾದ ನಡೆಯುತ್ತಿರುವುದು ಕಾಣಿಸುತ್ತದೆ.

ವೀಡಿಯೊದಲ್ಲಿ ಕೆಲವು ಸ್ಪರ್ಧಿಗಳು ಧೈರ್ಯದಿಂದ ಪ್ರತಿಭಟನಾಕಾರರ ಎದುರು ನಿಂತು, ತಮ್ಮನ್ನು ಚಿತ್ರೀಕರಿಸುತ್ತಿರುವುದನ್ನು ವಿರೋಧಿಸಿದ್ದಾರೆ. ಈ ವೇಳೆ ಭಟ್ನಾಗರ್ “ಇಂತಹ ಕೆಲಸಗಳನ್ನು ನಿಮ್ಮ ಮನೆಗಳಲ್ಲಿಯೇ ಮಾಡಿ” ಎಂದು ಹೇಳುತ್ತಿರುವುದು ಕೇಳಿ ಬಂದಿದೆ.

ಕಾರ್ಯಕ್ರಮ ಸಂಯೋಜಕರು ಸ್ಪರ್ಧೆಯನ್ನು ಪೋಷಕರ ಪೂರ್ಣ ಅನುಮತಿಯೊಂದಿಗೆ ಆಯೋಜಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರೂ, ಭಟ್ನಾಗರ್ “ತೀರ್ಥಯಾತ್ರೆಗಳ ನಗರದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಭಟ್ನಾಗರ್, “ಪಾಶ್ಚಾತ್ಯ ಉಡುಪುಗಳಲ್ಲಿ ರ್ಯಾಂಪ್ ವಾಕ್ ಮಾಡುವುದು ಋಷಿಕೇಶದ ಗುರುತು ಹಾಗೂ ಸನಾತನ ಮೌಲ್ಯಗಳಿಗೆ ವಿರುದ್ಧವಾಗಿದೆ. ಸನಾತನ ಧರ್ಮವು ಮಹಿಳೆಯರಿಗೆ ಶಿಷ್ಟವಾಗಿ ಉಡುಗೆ ತೊಡುವುದನ್ನು ಕಲಿಸುತ್ತದೆ. ಇಂತಹ ಕಾರ್ಯಕ್ರಮಗಳು ಧಾರ್ಮಿಕ ಮತ್ತು ಸಾಮಾಜಿಕ ಭಾವನೆಗಳಿಗೆ ನೋವುಂಟುಮಾಡುತ್ತವೆ” ಎಂದು ಹೇಳಿದ್ದಾರೆ.

ಕಳೆದ ಐದು ವರ್ಷಗಳಿಂದ ಈ ಸ್ಪರ್ಧೆಯನ್ನು ನಿರಂತರವಾಗಿ ಆಯೋಜಿಸಲಾಗುತ್ತಿದ್ದು, ಈವರೆಗೆ ಯಾವುದೇ ಗಲಾಟೆ ಅಥವಾ ಆಕ್ಷೇಪಣೆ ಎದುರಾಗಿಲ್ಲ ಎಂದು ಕಾರ್ಯಕ್ರಮದ ಆಯೋಜಕ ಧೀರಜ್ ಮಖಿಜಾ ಅವರು ತಿಳಿಸಿದರು.“ಸ್ಥಳೀಯ ಮಹಿಳೆಯರು ತಮ್ಮ ಪ್ರತಿಭೆ ಪ್ರದರ್ಶಿಸಲು ಹಾಗೂ ದೊಡ್ಡ ಮಟ್ಟದ ಸ್ಪರ್ಧೆಗಳಿಗೆ ಸಿದ್ಧಗೊಳ್ಳಲು ಈ ವೇದಿಕೆ ಸಹಾಯಕವಾಗಿದೆ,” ಎಂದು ಅವರು ಹೇಳಿದರು.

ಪ್ರತಿಭಟನೆ ನಡೆದಿದ್ದರೂ ಮಿಸ್ ಋಷಿಕೇಶ್ ಸ್ಪರ್ಧೆ ಶನಿವಾರ ನಿಗದಿಯಂತೆ ನಡೆದಿದ್ದು, ಯಾವುದೇ ಅಧಿಕೃತ ದೂರು ಪೊಲೀಸರಿಗೆ ಬಂದಿಲ್ಲ. ಅಧಿಕಾರಿಗಳು ಎರಡೂ ಪಕ್ಷಗಳ ನಡುವಿನ ವಿವಾದವನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆ ನಡೆಸಿದ ಸಂಘಟನೆಯು, 2017ರಲ್ಲಿ ನೋಂದಾಯಿತ ರಾಷ್ಟ್ರೀಯ ಹಿಂದೂ ಶಕ್ತಿ ಸಂಘಟನೆಯಾಗಿದ್ದು, ತನ್ನನ್ನು “ಧಾರ್ಮಿಕ ಮತಾಂತರ ವಿರೋಧಿ” ಹಾಗೂ ʼಲವ್ ಜಿಹಾದ್ʼ ವಿರುದ್ಧದ ಕಾನೂನುಗಳನ್ನು ಬೆಂಬಲಿಸುವ ಸಂಘಟನೆ” ಎಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News