×
Ad

ಸಂವಿಧಾನ ದಿನ | ಮೊದಲ ಬಾರಿಯ ಮತದಾರರನ್ನು ಗೌರವಿಸಿ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

Update: 2025-11-26 11:19 IST

ಪ್ರಧಾನಿ ನರೇಂದ್ರ ಮೋದಿ (Photo: PTI)

ಹೊಸದಿಲ್ಲಿ: ಮತದಾನದ ಹಕ್ಕು ಪ್ರಜಾಪ್ರಭುತ್ವದ ಹೃದಯಸ್ವರೂಪವಾಗಿದ್ದು, ಪ್ರತಿಯೊಬ್ಬರೂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.18 ವರ್ಷ ತುಂಬಿ ಮೊದಲ ಬಾರಿಗೆ ಮತ ಚಲಾಯಿಸಲಿರುವ ಯುವ ಮತದಾರರನ್ನು ಗೌರವಿಸುವ ಮೂಲಕ ಶಾಲೆಗಳು ಮತ್ತು ಕಾಲೇಜುಗಳು ಸಂವಿಧಾನ ದಿನವನ್ನು ಆಚರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಸಂವಿಧಾನ ದಿನದ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಪತ್ರ ಬರೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾಗರಿಕ ಕರ್ತವ್ಯಗಳ ಪಾಲನೆಯೇ ಪ್ರಮುಖ ಅಡಿಪಾಯ ಎಂದು ಒತ್ತಿ ಹೇಳಿದ್ದಾರೆ.

ಮಹಾತ್ಮ ಗಾಂಧಿಯವರ “ಕರ್ತವ್ಯಗಳಿಂದಲೇ ಹಕ್ಕುಗಳ ಸೃಷ್ಟಿ” ಎಂಬ ವಾಕ್ಯವನ್ನು ಉಲ್ಲೇಖಿಸಿದ ಮೋದಿ ಅವರು, ಕರ್ತವ್ಯಪಾಲನೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಗಟ್ಟಿಯಾದ ನೆಲೆಗಟ್ಟನ್ನು ಹಾಕುತ್ತದೆ ಎಂದರು.

“ಇಂದು ಕೈಗೊಳ್ಳುತ್ತಿರುವ ನೀತಿಗಳು ಮತ್ತು ನಿರ್ಧಾರಗಳು ಮುಂದಿನ ಪೀಳಿಗೆಯ ಜೀವನವನ್ನು ರೂಪಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ವಿಕಸಿತ ಭಾರತದ ದೃಷ್ಟಿಯತ್ತ ನಾವು ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ನಾಗರಿಕರು ತಮ್ಮ ಕರ್ತವ್ಯಗಳನ್ನು ಗುರಿಯಾಗಿರಿಸಿಕೊಳ್ಳಬೇಕು” ಎಂದು ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ.

ಸಂವಿಧಾನ ಮಾನವ ಘನತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಅತ್ಯಂತ ಮಹತ್ವ ನೀಡುತ್ತದೆ ಎಂದು ಅವರು X ನಲ್ಲಿನ ತಮ್ಮ ಖಾತೆಯಲ್ಲಿ ಪ್ರತ್ಯೇಕವಾಗಿ ಬರೆದಿದ್ದು, “ನಮ್ಮ ಸಂವಿಧಾನವು ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ನೆನಪಿಸುತ್ತದೆ. ಈ ಕರ್ತವ್ಯಗಳೇ ಬಲಿಷ್ಠ ಪ್ರಜಾಪ್ರಭುತ್ವದ ಮೂಲತತ್ವ” ಎಂದು ಹೇಳಿದ್ದಾರೆ.

ಸಂವಿಧಾನದ ನಿರ್ಮಾತೃಗಳಿಗೆ ಗೌರವ ಸಲ್ಲಿಸಿದ ಪ್ರಧಾನಿ, “ವಿಕಸಿತ ಭಾರತ ನಿರ್ಮಾಣದ ನಮ್ಮ ಯತ್ನಕ್ಕೆ ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಸದಾ ಪ್ರೇರಣೆ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News