×
Ad

ಛತ್ತೀಸ್‌ಗಢದಲ್ಲಿ ಭೀಕರ ರಸ್ತೆ ಅಪಘಾತ: 13 ಮಂದಿ ಮೃತ್ಯು, 12 ಮಂದಿಗೆ ಗಾಯ

Update: 2025-05-12 15:59 IST

ಸಾಂದರ್ಭಿಕ ಚಿತ್ರ

ರಾಯ್ಪರ: ವೇಗವಾಗಿ ಚಲಿಸುತ್ತಿದ್ದ ಟ್ರಕ್ ಒಂದು ಟ್ರೇಲರ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದ 9 ಮಂದಿ ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 13 ಮಂದಿ ಸ್ಥಳದಲ್ಲೇ ಮೃತಪಟ್ಟು, 12 ಮಂದಿ ಗಾಯಗೊಂಡಿರುವ ಘಟನೆ ರಾಯ್ಪುರ ಜಿಲ್ಲೆಯ ರಾಯ್ಪುರ-ಬಲೋಡಬಝಾರ್ ರಸ್ತೆಯಲ್ಲಿ ಸಂಭವಿಸಿದೆ.

ರಾಯ್ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ರಾಥೋರ್ ಪ್ರಕಾರ, ಕೌಟುಂಬಿಕ ಸಮಾರಂಭವೊಂದರಲ್ಲಿ ಪಾಲ್ಹೊಳ್ಳಲು ಚತೌಡ್ ಗ್ರಾಮದ ಕುಟುಂಬವೊಂದು ಬನ್ಸಾರಿ ಗ್ರಾಮಕ್ಕೆ ತೆರಳಿತ್ತು. ಅಲ್ಲಿಂದ ಮನೆಗೆ ಮರಳುವಾಗ, ಅವರು ಪ್ರಯಾಣಿಸುತ್ತಿದ್ದ ಟ್ರಕ್, ಖರೋರ ಪೊಲೀಸ್ ಠಾಣೆ ಪ್ರದೇಶದ ಸರಗಾಂವ್ ಬಳಿ ಟ್ರೇಲರ್ ಒಂದಕ್ಕೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ, ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿಗಳು, ಅಪಘಾತಕ್ಕೀಡಾಗಿದ್ದವರನ್ನು ರಕ್ಷಿಸಿದ್ದಾರೆ. ಈ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ತಕ್ಷಣವೇ ಖರೋರದಲ್ಲಿನ ಸ್ಥಳೀಯ ಸಾಮುದಾಯಿಕ ಆರೋಗ್ಯ ಕೇಂದ್ರ ಹಾಗೂ ರಾಯ್ಪುರದಲ್ಲಿನ ಡಾ. ಭೀಮರಾವ್ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಿದ್ದಾರೆ.

ದುಡುಕು ಹಾಗೂ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಜಿಲ್ಲಾಡಳಿತದ ಅಧಿಕಾರಿಗಳೂ ಘಟನಾ ಸ್ಥಳಕ್ಕೆ ತಲುಪಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ ಎಂದು ರಾಯ್ಪುರ ಜಿಲ್ಲಾಧಿಕಾರಿ ಗೌರವ್ ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News