×
Ad

ಅಮಿತ್ ಶಾ ವಿರುದ್ಧ ನನ್ನ ಬಳಿ ಪೆನ್ ಡ್ರೈವ್ ಇದೆ: ಮಮತಾ ಬ್ಯಾನರ್ಜಿ ಬೆದರಿಕೆ

ಕಲ್ಲಿದ್ದಲು ಹಗರಣವನ್ನು ಬಯಲುಗೊಳಿಸಲಾಗುವುದು ಎಂದೂ ಎಚ್ಚರಿಸಿದ ಪಶ್ಚಿಮ ಬಂಗಾಳ ಸಿಎಂ

Update: 2026-01-10 14:59 IST

Photo credit: PTI

ಕೋಲ್ಕತ್ತಾ: ನಿರ್ದಿಷ್ಟ ಹಂತವನ್ನು ಮೀರಿ ನನ್ನ ಮೇಲೆ ಹಾಗೂ ನನ್ನ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿರುವ ಕಲ್ಲಿದ್ದಲು ಹಗರಣದ ವಿವರವನ್ನು ಬಹಿರಂಗಗೊಳಿಸಲಾಗುವುದು ಎಂದು ಶುಕ್ರವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದ ರಾಜಕೀಯ ಸಮಾಲೋಚನಾ ಸಂಸ್ಥೆ ಐಪ್ಯಾಕ್ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಬೆನ್ನಲ್ಲೇ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಐಪ್ಯಾಕ್ ಮೇಲೆ ನಡೆದ ಜಾರಿ ನಿರ್ದೇಶನಾಲಯದ ದಾಳಿಯನ್ನು ಪ್ರತಿಭಟಿಸಲು ನೆರೆದಿದ್ದ ಭಾರಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ,

“ನನ್ನ ಬಳಿ ಪೆನ್ ಡ್ರೈವ್‌ಗಳಿವೆ. ನಾನು ಹೊಂದಿರುವ ಹುದ್ದೆಯ ಮೇಲೆ ಗೌರವದಿಂದಾಗಿ ನಾನು ಮೌನವಾಗಿದ್ದೆ. ನನ್ನ ಮೇಲೆ ಅತಿಯಾದ ಒತ್ತಡ ಹೇರಬೇಡಿ. ನಾನು ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ. ಅದರಿಂದ ಇಡೀ ದೇಶವೇ ಆಘಾತಕ್ಕೊಳಗಾಗಲಿದೆ” ಎಂದು ಎಚ್ಚರಿಸಿದರು.

ಗುರುವಾರ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಐಪ್ಯಾಕ್ ಕಚೇರಿ ಹಾಗೂ ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ್ದ ಜಾರಿ ನಿರ್ದೇಶನಾಲಯ, ಅಕ್ರಮವಾಗಿ ಹಣ ಗಳಿಸಿದ ಬೇರುಗಳನ್ನು ಹೊಂದಿರುವ ಸಂಸ್ಥೆಯೊಂದು ಐಪ್ಯಾಕ್‌ನೊಂದಿಗೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಹಿವಾಟುಗಳನ್ನು ನಡೆಸಿರುವುದು ತನಿಖಾ ಹಂತದಲ್ಲಿ ಪತ್ತೆಯಾಗಿದೆ ಎಂದು ಹೇಳಿತ್ತು.

ಇದರ ಬೆನ್ನಲ್ಲೇ, ಪೊಲೀಸರೊಂದಿಗೆ ತಮ್ಮ ಆಪ್ತರೊಂದಿಗೆ ತನಿಖಾ ಸ್ಥಳಕ್ಕೆ ಆಗಮಿಸಿದ್ದ ಮಮತಾ ಬ್ಯಾನರ್ಜಿ, ಕಡತಗಳಲ್ಲಿ ಸೂಕ್ಷ್ಮ ಚುನಾವಣಾ ಕಾರ್ಯತಂತ್ರಗಳು ಅಡಗಿವೆ ಎಂದು ಪ್ರತಿಪಾದಿಸಿ, ಸ್ಥಳದಿಂದ ಕಡತಗಳು ಹಾಗೂ ಪೆನ್ ಡ್ರೈವ್‌ಗಳನ್ನು ಹೊತ್ತೊಯ್ದರು. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News