2022ರಲ್ಲಿ ರೇಬಿಸ್ ನಿಂದ ಮೃತರ ಪ್ರಮಾಣದಲ್ಲಿ ಆಂಧ್ರಪ್ರದೇಶ, ಕರ್ನಾಟಕಕ್ಕೆ ಮೂರನೆ ಸ್ಥಾನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: 2022ರಲ್ಲಿ ದೇಶಾದ್ಯಂತ ಸಂಭವಿಸಿದ ರೇಬಿಸ್ ಸೋಂಕಿನಿಂದಾದ ಮರಣ ಪ್ರಮಾಣದಲ್ಲಿ ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳು ಮೂರನೆ ಸ್ಥಾನದಲ್ಲಿವೆ. ಕೇರಳ ಸಂಸದ ಡೀನ್ ಕುರಿಯಾಕೋಸ್ ಅವರ ಪ್ರಶ್ನೆಗೆ ಪ್ರತಿಯಾಗಿ ಈ ಕುರಿತ ವರದಿಯನ್ನು ಜುಲೈ 21ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಬಘೇಲ್ ಲೋಕಸಭೆಯ ಮುಂದೆ ಮಂಡಿಸಿದರು. ವರದಿಯ ಪ್ರಕಾರ, ದಕ್ಷಿಣ ಭಾರತದ ಐದು ರಾಜ್ಯಗಳು ಅತಿ ಹೆಚ್ಚು ರೇಬಿಸ್ ಸೋಂಕಿನ ಮರಣ ಪ್ರಮಾಣವನ್ನು ದಾಖಲಿಸಿವೆ. ಇಡೀ ಭಾರತದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಮೂರನೆ ಅತಿ ಹೆಚ್ಚು ರೇಬಿಸ್ ಸೋಂಕಿನ ಮರಣ(ತಲಾ 29)ಗಳನ್ನು ದಾಖಲಿಸಿದ್ದರೆ, ಕೇರಳ 27 ಮರಣಗಳೊಂದಿಗೆ ನಾಲ್ಕನೆಯ ಸ್ಥಾನದಲ್ಲಿ, ತೆಲಂಗಾಣ 21 ಮರಣಗಳೊಂದಿಗೆ ಐದನೆಯ ಸ್ಥಾನದಲ್ಲಿ ಹಾಗೂ ತಮಿಳುನಾಡು 20 ಮರಣಗಳೊಂದಿಗೆ ಆರನೆಯ ಸ್ಥಾನದಲ್ಲಿದೆ ಎಂದು thenewsminute.com ವರದಿ ಮಾಡಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಾವಾರು ದತ್ತಾಂಶಗಳೊಂದಿಗೆ ನಾಯಿ ಕಡಿತದಿಂದ ರೇಬಿಸ್ ಸೋಂಕಿಗೆ ತುತ್ತಾಗಿ ಸಂಭವಿಸಿರುವ ಮರಣಗಳ ವಿವರ; ಕೇರಳದ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ನಿರೋಧಕ ಲಸಿಕೆ ಹಾಗೂ ಔಷಧಗಳ ಲಭ್ಯತೆಯನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳು; ಕೇರಳದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಹಾಗೂ ತಡೆಯಲು ತೆಗೆದುಕೊಂಡಿರುವ ಕ್ರಮಗಳು ಹಾಗೂ ಪ್ರಸ್ತಾವನೆಗಳು ಹಾಗೂ ನಾಯಿ ಕಡಿತವನ್ನು ತಪ್ಪಿಸಲು ನಾಯಿಗಳನ್ನು ಹತ್ಯೆಗೈಯ್ಯುವ ಅಧಿಕಾರವನ್ನು ಸ್ಥಳೀಯ ಆಡಳಿತಗಳಿಗೆ ಸರ್ಕಾರ ನೀಡಲಿದೆಯೆ ಎಂಬ ಕುರಿತು ವಿವರ ಒದಗಿಸುವಂತೆ ಡೀನ್ ಕುರಿಯಾಕೋಸ್ ಸಚಿವಾಲಯವನ್ನು ಕೇಳಿದ್ದರು.
ಕೇರಳಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ ಲಭ್ಯವಿರುವ ಲಸಿಕೆಗಳು ಹಾಗೂ ರೋಗನಿರೋಧಕಗಳ ಮೇಲೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ದೈನಂದಿನ ನೆಲೆಯಲ್ಲಿ ನಿಗಾ ವಹಿಸಲಾಗಿದ್ದು, ಅಗತ್ಯ ಬಿದ್ದರೆ ಅವನ್ನು ನೆರೆಯ ಜಿಲ್ಲೆಗಳಿಂದಲೂ ತರಿಸಿಕೊಳ್ಳಬಹುದಾಗಿದೆ ಎಂದು ಸಚಿವ ಬಘೇಲ್ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಬೀದಿ ನಾಯಿಗಳನ್ನು ನಿಯಂತ್ರಿಸಲು ಕೇರಳ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕುರಿತು ವಿವರಿಸಿದ ಸಚಿವರು, ಬೀದಿ ನಾಯಿಗಳ ದಾಳಿಯನ್ನು ನಿಯಂತ್ರಿಸುವ ಸಲುವಾಗಿ ಬೀದಿ ನಾಯಿಗಳನ್ನು ಕೊಲ್ಲಲು ಚಾಲ್ತಿಯಲ್ಲಿರುವ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2022ರಲ್ಲಿ ರೇಬಿಸ್ ಸೋಂಕಿನಿಂದಾಗಿರುವ ಮರಣಗಳ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಾವಾರು ದತ್ತಾಂಶಗಳನ್ನೂ ಸಚಿವರು ಒದಗಿಸಿದರು. ಇಡೀ ದೇಶದಲ್ಲಿ ರೇಬಿಸ್ ಸೋಂಕಿನಿಂದ ಸಂಭವಿಸಿರುವ ಮರಣಗಳಲ್ಲಿ ದಿಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಇಲ್ಲಿ 48 ಮರಣಗಳು ಸಂಭವಿಸಿವೆ. ನಂತರ, ಕ್ರಮವಾಗಿ ಪಶ್ಚಿಮ ಬಂಗಾಳ (38), ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ (ತಲಾ 29), ಕೇರಳ (27), ತಮಿಳುನಾಡು (27), ಬಿಹಾರ ಮತ್ತು ತೆಲಂಗಾಣ (ತಲಾ 21), ತಮಿಳುನಾಡು (16) ಹಾಗೂ ಅಸ್ಸಾಂ (12) ರಾಜ್ಯಗಳಿವೆ. ಉಳಿದಂತೆ ಇನ್ನಿತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 10ಕ್ಕಿಂತಲೂ ಕಡಿಮೆ ಪ್ರಮಾಣದ ಮರಣ ಸಂಖ್ಯೆಯನ್ನು ದಾಖಲಿಸಿವೆ.