×
Ad

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಶಿಷ್ಟಾಚಾರ ಪಾಲಿಸುತ್ತಿಲ್ಲ": ಚರ್ಚೆಗೆ ಗ್ರಾಸವಾದ ವಿದೇಶಿ ಪ್ರಯಾಣಿಕನ ಪೋಸ್ಟ್‌

Update: 2025-10-22 19:45 IST

ಸಾಂದರ್ಭಿಕ ಚಿತ್ರ | Photo Credit : PTI

ಹೊಸದಿಲ್ಲಿ: ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರಯಾಣಿಕರೊಬ್ಬರು ಭಾರತದಲ್ಲಿ ʼಸಾರ್ವಜನಿಕ ಶಿಷ್ಟಾಚಾರದʼ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

“ಭಾರತೀಯ ಶಿಷ್ಟಾಚಾರ”ಎಂಬ ಶೀರ್ಷಿಕೆಯೊಂದಿಗೆ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯು, ದಿಲ್ಲಿಯಲ್ಲಿ ಮೂರು ದಿನಗಳನ್ನು ಕಳೆದ ಬಳಿಕ ಜನರ ಸಾರ್ವಜನಿಕ ವರ್ತನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾನೆ. ಸಾರ್ವಜನಿಕ ಸ್ಥಳಗಳಲ್ಲಿ ಶಿಷ್ಟಾಚಾರದ ಕೊರತೆ ಬಗ್ಗೆ ಹೇಳಿದ್ದಾನೆ.

ಭಾರತದಲ್ಲಿ ಮೂರು ದಿನಗಳಿಂದ ಇದ್ದೇನೆ. ಈಗ ದಿಲ್ಲಿಯಲ್ಲಿದ್ದೇನೆ. ಸ್ವಲ್ಪ ಜ್ವರ ಬಂದಿದೆ. ಅದು ಬಿಟ್ಟು ಇಲ್ಲಿಯವರೆಗೂ ನನ್ನ ಪ್ರಯಾಣ ಚೆನ್ನಾಗಿಯೇ ನಡೆಯಿತು. ಆದರೆ ನಾನು ಗಮನಿಸಿದ ಒಂದು ವಿಷಯವೆಂದರೆ ಶಿಷ್ಟಾಚಾರದ ಕೊರತೆ. ಜನರು ಸರತಿ ಸಾಲಿನಲ್ಲಿ ನಿಂತು ಕಾಯುವ ಶಿಸ್ತನ್ನು ಪಾಲಿಸುವುದಿಲ್ಲ. ನೀವು ಐದು ನಿಮಿಷ ಕಾಯುತ್ತಿದ್ದರೂ, ಅವರು ನೇರವಾಗಿ ಮುಂದೆ ಹೋಗುತ್ತಾರೆ. ನಂತರ ನೀವು ಅವರನ್ನು ಕರೆದರೆ, ಸರತಿ ಸಾಲಿನಲ್ಲಿ ನಿಲ್ಲಬೇಕೆಂದು ತಿಳಿದಿರಲಿಲ್ಲ ಎಂದು ಅವರು ಅಚ್ಚರಿಪಡುತ್ತಾರೆ ಎಂದು ಹೇಳಿದರು.

ಇದಲ್ಲದೆ ಪ್ರವಾಸಿಗ ಬಸ್ ನಲ್ಲಿ ತನಗಾಗಿರುವ ಅನಾನುಕೂಲತೆ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಒಬ್ಬ ಸಹ ಪ್ರಯಾಣಿಕನು ತನ್ನ ಆಸನವನ್ನು ತುಂಬಾ ಹಿಂದಕ್ಕೆ ಒರಗಿಸಿಕೊಂಡನು. ಇದರಿಂದ ಇಕ್ಕಟ್ಟಾಗಿ ನನಗೆ ಕುಳಿತುಕೊಳ್ಳಲು ಜಾಗವಿರಲಿಲ್ಲ. ಆದರೆ ಆತನಲ್ಲಿ ಆ ವಿಷಯವನ್ನು ಹೇಳಿದಾಗ ಕೋಪಗೊಂಡಂತೆ ಕಾಣುತ್ತಿದ್ದನು. ನನ್ನನ್ನು ದಿಟ್ಟಿಸಿ ಹಿಂದಿಯಲ್ಲಿ ಗೊಣಗುತ್ತಿದ್ದನು ಎಂದು ಅವರು ಹೇಳಿದರು.

ಆ ವಿದೇಶಿ ಪ್ರಯಾಣಿಕ ಈ ವರ್ತನೆ ಸಾಂಸ್ಕೃತಿಕ ವಿಷಯವೇ? ಎಂದು ಪ್ರಶ್ನಿಸಿದನು. ಇಂತಹ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಸಲಹೆ ಕೇಳಿದನು. ಇದು ಭಾರತೀಯ ಸಂಸ್ಕೃತಿಯ ಭಾಗವೇ? ಜನರು ಇದನ್ನು ಹೇಗೆ ನಿಭಾಯಿಸುತ್ತಾರೆ? ಭಾರತೀಯರು ತುಂಬ ಸ್ನೇಹಪರರು, ಒಳ್ಳೆಯ ಜನರು, ಆದರೆ ಅವರ ಸಾರ್ವಜನಿಕ ಶಿಷ್ಟಾಚಾರದಲ್ಲಿ ಕೊರತೆ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು? ಎಂದು ಪ್ರಶ್ನಿಸುತ್ತಾನೆ.

ಈ ಪೋಸ್ಟ್ ಭಾರತದಲ್ಲಿ ನಾಗರಿಕರ ನಡವಳಿಕೆ ಮತ್ತು ಸಾಮಾಜಿಕ ಶಿಷ್ಟಾಚಾರದ ಬಗ್ಗೆ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ.

“ಇದನ್ನು ಸಹಿಸಬೇಕು. ನಿಷ್ಠೆಯಿಂದ ಹೇಳಬೇಕಾದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ನಾನು ಇದೇ ತರದ ಅಥವಾ ಇನ್ನೂ ಕೆಟ್ಟ ಅನುಭವಗಳನ್ನು ಎದುರಿಸಿದ್ದೇನೆ. ಇದು ಕೇವಲ ಭಾರತದ ಸಮಸ್ಯೆಯಲ್ಲ. ವಿದೇಶದಲ್ಲಿ ಹೋಗಿ ಜಗಳವಾಡಲು ಆಗುವುದಿಲ್ಲ. ಉದಾಹರಣೆಗೆ, ವಿಯೆನ್ನಾದಲ್ಲಿ ಜನ ತುಂಬಾ ಒರಾಟಾಗಿ ವರ್ತಿಸಿದರು. ಆಗ ನನಗೆ ಭಾರತ ತುಂಬಾ ನೆನಪಾಯಿತು. ಆದರೆ ಏನು ಮಾಡಲಿ? ಶಾಂತವಾಗಿ ಸಹಿಸಿಕೊಂಡೆ” ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸುತ್ತಾ, ನಾನು ಭಾರತೀಯ, ನನ್ನ ಸಂಪೂರ್ಣ ಜೀವನವನ್ನು ಭಾರತದಲ್ಲೇ ಕಳೆದಿದ್ದೇನೆ. ಆದರೆ ಈ ಶಿಷ್ಟಾಚಾರದ ಕೊರತೆ ಕೆಲವು ಭಾಗಗಳಲ್ಲಿ ಮಾತ್ರ ಇದೆ.ನಾನು ರಾಷ್ಟ್ರ ರಾಜಧಾನಿಗೆ ಹೋದಾಗ ಈ ಬಗ್ಗೆ ನಿರಾಸೆಗೊಂಡಿದ್ದೇನೆ. ಉಳಿದ ಕಡೆ ಈ ರೀತಿಯಿಲ್ಲ ಎಂದು ಮತ್ತೋರ್ವ ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News