×
Ad

ಅಮೆರಿಕದ ತಲಾದಾಯದ ಕಾಲು ಭಾಗವನ್ನು ತಲುಪಲು ಭಾರತಕ್ಕೆ 75 ವರ್ಷಗಳು ಬೇಕಾಗಬಹುದು: ವಿಶ್ವಬ್ಯಾಂಕ್

Update: 2024-08-03 16:10 IST

World Bank | Photo credit; investopedia.com

ಹೊಸದಿಲ್ಲಿ: ಪ್ರಸ್ತುತ ಪ್ರವೃತ್ತಿಗಳೇ ಮುಂದುವರಿದರೆ ಭಾರತದ ತಲಾದಾಯವು ಅಮೆರಿಕದ ತಲಾದಾಯದ ಕಾಲು ಭಾಗವನ್ನು ತಲುಪಲು ಸುಮಾರು 75 ವರ್ಷಗಳು ಬೇಕಾಗುತ್ತವೆ ಎಂದು ವಿಶ್ವಬ್ಯಾಂಕ್ ಗುರುವಾರ ತನ್ನ ವರದಿಯಲ್ಲಿ ತಿಳಿಸಿದೆ.

ವಿಶ್ವಬ್ಯಾಂಕ್ ತನ್ನ ‘ವರ್ಲ್ಡ್ ಡೆವಲಪ್‌ಮೆಂಟ್ ರಿಪೋರ್ಟ್ 2024:ದಿ ಮಿಡ್ಲ್ ಇನ್‌ಕಮ್ ಟ್ರ್ಯಾಪ್’ ಶೀರ್ಷಿಕೆಯ ವರದಿಯಲ್ಲಿ ಭಾರತ ಸೇರಿದಂತೆ 100ಕ್ಕೂ ಅಧಿಕ ದೇಶಗಳು ಮುಂದಿನ ಕೆಲವು ದಶಕಗಳಲ್ಲಿ ಹೆಚ್ಚಿನ ಆದಾಯದ ರಾಷ್ಟ್ರಗಳಾಗುವಲ್ಲಿ ಗಂಭೀರ ಅಡೆತಡೆಗಳನ್ನು ಎದುರಿಸುತ್ತಿವೆ ಎಂದು ಹೇಳಿದೆ.

ಕಳೆದ 50 ವರ್ಷಗಳ ಪ್ರವತ್ತಿಗಳನ್ನು ಅಧ್ಯಯನ ಮಾಡಿರುವ ವರದಿಯು, ಅಮೆರಿಕದ ತಲಾದಾಯದ ಕಾಲು ಭಾಗವನ್ನು ತಲುಪಲು ಚೀನಾಕ್ಕೆ 10 ವರ್ಷಗಳು ಬೇಕಾಗಬಹುದು ಮತ್ತು ಇಂಡೋನೇಶ್ಯಾ ಸುಮಾರು 70 ವರ್ಷಗಳನ್ನು ತೆಗೆದುಕೊಳ್ಳಲಿದೆ ಎಂದಿದೆ.

ದೇಶಗಳು ಸಂಪದ್ಭರಿತವಾಗಿ ಬೆಳೆಯುತ್ತಿದ್ದಂತೆ ಅವು ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೆ ಅಮೆರಿಕದ ವಾರ್ಷಿಕ ಜಿಡಿಪಿಯ ಸುಮಾರು ಶೇ.10ರಲ್ಲಿದ್ದಾಗ ಅಡ್ಡಿಯನ್ನೆದುರಿಸುತ್ತವೆ, ಪ್ರಸ್ತುತ ಇದು 8,000 ಡಾಲರ್ ಅಥವಾ 6.7 ಲಕ್ಷ ರೂ.ಗಳಷ್ಟಿದೆ. ಇದು ಹಣಕಾಸು ಸಂಸ್ಥೆಗಳು ‘ಮಧ್ಯಮ ಆದಾಯದ ದೇಶಗಳು’ ಎಂದು ಬಣ್ಣಿಸುವ ಆದಾಯ ಶ್ರೇಣಿಯ ಮಧ್ಯದಲ್ಲಿದೆ.

1990ರಿಂದ ಕೇವಲ 34 ಮಧ್ಯಮ ಆದಾಯದ ದೇಶಗಳು ಹೆಚ್ಚಿನ ಆದಾಯದ ದೇಶಗಳಾಗುವಲ್ಲಿ ಯಶಸ್ಸು ಕಂಡಿವೆ ಎಂದು ಹೇಳಿರುವ ವರದಿಯು, ಈ ಪೈಕಿ ಮೂರನೇ ಒಂದಕ್ಕೂ ಅಧಿಕ ದೇಶಗಳು ಐರೋಪ್ಯ ಒಕ್ಕೂಟಕ್ಕೆ ಸೇರ್ಪಡೆಯಿಂದ ಅಥವಾ ಹಿಂದೆ ಶೋಧಿಸಲಾಗಿದ್ದ ತೈಲ ನಿಕ್ಷೇಪಗಳಿಂದ ಲಾಭವನ್ನು ಪಡೆದಿವೆ ಎಂದಿದೆ.

2023ರ ಅಂತ್ಯದ ವೇಳೆಗೆ 108 ದೇಶಗಳು ಮಧ್ಯಮ ಆದಾಯದ ರಾಷ್ಟ್ರಗಳಾಗಿದ್ದವು. ಇವು 9,95,193 ರೂ. ಮತ್ತು 11,60,175 ರೂ. ನಡುವೆ ವಾರ್ಷಿಕ ತಲಾವಾರು ಜಿಡಿಪಿಯನ್ನು ಹೊಂದಿದ್ದವು. ಈ ದೇಶಗಳು ಒಟ್ಟು ಸುಮಾರು 600 ಕೋಟಿ ಜನಸಂಖ್ಯೆ ಹೊಂದಿದ್ದು, ಇದು ಜಾಗತಿಕ ಜನಸಂಖ್ಯೆಯ ಶೇ.75ರಷ್ಟಿದೆ ಮತ್ತು ಪ್ರತಿ ಮೂವರಲ್ಲಿ ಇಬ್ಬರು ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ವರದಿಯು ಹೇಳಿದೆ.

‘ಮುಂದಿನ ದಾರಿಯು ಹೆಚ್ಚುತ್ತಿರುವ ಹಿರಿಯರ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಸಾಲಗಳು,ಭೀಕರ ಭೂರಾಜಕೀಯ ಮತ್ತು ವ್ಯಾಪಾರ ಸಂಘರ್ಷಗಳು ಹಾಗೂ ಪರಿಸರಕ್ಕೆ ಹಾನಿಯನ್ನುಂಟು ಮಾಡದೆ ಆರ್ಥಿಕ ಪ್ರಗತಿಯನ್ನು ತ್ವರಿತಗೊಳಿಸುವಲ್ಲಿ ಹೆಚ್ಚುತ್ತಿರುವ ತೊಂದರೆಗಳಂತಹ ಹಿಂದಿಗಿಂತ ಹೆಚ್ಚು ಕಠಿಣ ಸವಾಲುಗಳನ್ನು ಹೊಂದಿದೆ ’ ಎಂದು ವಿಶ್ವಬ್ಯಾಂಕ್ ಸಮೂಹದ ಮುಖ್ಯ ಆರ್ಥಿಕ ತಜ್ಞ ಇಂದರಮಿತ್ ಗಿಲ್ ಅವರು ವರದಿಯಲ್ಲಿ ಬರೆದಿದ್ದಾರೆ.

ಆದರೂ ಅನೇಕ ಮಧ್ಯಮ ಆದಾಯದ ದೇಶಗಳು ಕಳೆದ ಶತಮಾನದ ಮಾದರಿಯನ್ನೇ ಈಗಲೂ ಬಳಸುತ್ತಿವೆ, ಹೂಡಿಕೆಯನ್ನು ವಿಸ್ತರಿಸಲು ರೂಪಿಸಲಾದ ನೀತಿಗಳನ್ನೇ ಮುಖ್ಯವಾಗಿ ಅವಲಂಬಿಸಿವೆ. ಇದು ವಾಹನವನ್ನು ಮೊದಲ ಗೇರ್‌ನಲ್ಲಿಟ್ಟುಕೊಂಡು ಅದನ್ನು ವೇಗವಾಗಿ ಚಲಾಯಿಸುವ ಪ್ರಯತ್ನದಂತಿದೆ ಎಂದಿರುವ ಗಿಲ್, ದೇಶಗಳು ಹಳೆಯ ಮಾದರಿಗೇ ಅಂಟಿಕೊಂಡರೆ ಈ ಶತಮಾನದ ಮಧ್ಯಭಾಗದಲ್ಲಿ ಸಾಕಷ್ಟು ಸಮೃದ್ಧ ಸಮಾಜಗಳನ್ನು ಸೃಷ್ಟಿಸುವುದರಲ್ಲಿ ಹಿಂದೆ ಬೀಳುತ್ತವೆ ಎಂದು ಹೇಳಿದ್ದಾರೆ.

ಪ್ರಗತಿಗಾಗಿ ದೇಶಗಳಿಗೆ ಮಾರ್ಗಸೂಚಿಗಳನ್ನು ವರದಿಯು ನೀಡಿದೆ. ಮೊದಲು ಹೂಡಿಕೆಯ ಮೇಲೆ ಗಮನ ಹರಿಸಿ, ಬಳಿಕ ವಿದೇಶಗಳಿಂದ ಹೊಸ ತಂತ್ರಜ್ಞಾನಗಳ ಒಳಹರಿವಿಗೆ ಒತ್ತು ನೀಡಿ ಮತ್ತು ಅಂತಿಮವಾಗಿ ಹೂಡಿಕೆ, ಒಳಹರಿವು ಹಾಗೂ ನವೀನತೆಗಳನ್ನು ಸಮತೋಲನಗೊಳಿಸುವ ಮೂರು ಆಯಾಮಗಳ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಿ ಎಂದು ಅದು ಸಲಹೆ ನೀಡಿದೆ.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನೂ ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಭಾರತ ಮತ್ತು ಇತರ ದೇಶಗಳಲ್ಲಿನ ಸರಕಾರಗಳು ದಕ್ಷಿಣ ಕೊರಿಯಾದಂತೆ ಮಧ್ಯಮ ಆದಾಯದ ಆರ್ಥಿಕತೆಯಿಂದ ಪರಿವರ್ತನೆಗೊಳ್ಳಲು ಬಯಸುತ್ತಿವೆ, ಆದರೆ ದ.ಕೊರಿಯಾ 25 ವರ್ಷಗಳಲ್ಲಿ ಸಾಧಿಸಿದ್ದನ್ನು 50 ವರ್ಷಗಳಲ್ಲಾದರೂ ಸಾಧಿಸಲು ಈ ದೇಶಗಳಿಗೆ ಸಾಧ್ಯವಾದರೆ ಅದು ಪವಾಡವಾಗಲಿದೆ ಎಂದೂ ವರದಿಯು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News