×
Ad

ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸ್ಥಳೀಯ ಕಾನೂನುಗಳನ್ನು ಅನುಸರಿಸಬೇಕು: ವಿದೇಶಾಂಗ ವ್ಯವಹಾರಗಳ ಸಚಿವಾಲಯ

Update: 2025-03-22 13:29 IST

 ರಣಧೀರ್ ಜೈಸ್ವಾಲ್ (Photo credit: ANI)

ಹೊಸದಿಲ್ಲಿ: ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಕಾನೂನುಗಳನ್ನು ಅನುಸರಿಸಬೇಕು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿದೆ.

ಹಮಾಸ್ ಪರ ಪ್ರಚಾರದ ಆರೋಪದಲ್ಲಿ ಅಮೆರಿಕದಲ್ಲಿ ಭಾರತೀಯ ಸಂಶೋಧಕ ಡಾ. ಬದರ್ ಖಾನ್ ಅವರ ಗಡೀಪಾರು ಬೆದರಿಕೆ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂಶೋಧನಾ ವಿಧ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಅವರ ವಿದ್ಯಾರ್ಥಿ ವೀಸಾ ಹಿಂಪಡೆದ ಬೆನ್ನಲ್ಲೇ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇಬ್ಬರು ಭಾರತೀಯರು ಸಹಾಯಕ್ಕಾಗಿ ಯುಎಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಭೇಟಿ ಮಾಡಿಲ್ಲ ಎಂದು ತಿಳಿಸಿದರು.

ಅಮೆರಿಕದ ಜಾರ್ಜ್‌ಟೌನ್‌ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ಸಂಶೋಧಕ ಬದರ್ ಖಾನ್ ಸೂರಿ ಅವರನ್ನು ಗಡೀಪಾರು ಮಾಡದಂತೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ಡೊನಾಲ್ಡ್ ಟ್ರಂಪ್ ಸರಕಾರಕ್ಕೆ ಗುರುವಾರ ಆದೇಶಿಸಿದರು. ಬದರ್ ಖಾನ್ ಸೂರಿ ಅವರನ್ನು ಲೂಸಿಯಾನಾದ ಅಲೆಕ್ಸಾಂಡ್ರಿಯಾದಲ್ಲಿ ಬಂಧನದಲ್ಲಿರಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿದ್ವಾಂಸರಾದ ರಂಜನಿ ಶ್ರೀನಿವಾಸನ್ ಅವರ ವಿದ್ಯಾರ್ಥಿ ವೀಸಾವನ್ನು ಹಿಂಪಡೆದುಕೊಂಡು ನಂತರ ಯುಎಸ್‌ನಿಂದ ಕೆನಡಾಕ್ಕೆ ತೆರಳುವಂತೆ ಒತ್ತಾಯಿಸಲಾಯಿತು. ಹಮಾಸ್ ಸಂಘಟನೆಯನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ರಂಜನಿ ತೊಡಗಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ʼಶ್ರೀನಿವಾಸನ್ ಅವರು ಸಹಾಯಕ್ಕಾಗಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿಲ್ಲ. ಮಾಧ್ಯಮ ವರದಿಗಳಿಂದ ಅವರು ಯುಎಸ್‌ನಿಂದ ನಿರ್ಗಮಿಸುವ ಬಗ್ಗೆ ನಮಗೆ ತಿಳಿದಿತ್ತು. ಅವರು ಕೆನಡಾಕ್ಕೆ ಹೋಗಿದ್ದಾರೆಂದು ನಾವು ಭಾವಿಸುತ್ತೇವೆʼ ಎಂದು ಜೈಸ್ವಾಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News