×
Ad

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ : 85ನೇ ಸ್ಥಾನಕ್ಕೆ ಕುಸಿದ ಭಾರತ

Update: 2025-10-15 20:54 IST

ಸಾಂದರ್ಭಿಕ ಚಿತ್ರ | Photo Credi : freepik.com

ಹೊಸದಿಲ್ಲಿ,ಅ.15: 2025ನೇ ಸಾಲಿನ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಪಾಸ್‌ಪೋರ್ಟ್ 85ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅದು ಐದು ಸ್ಥಾನ ಕೆಳಗಿಳಿದಿದೆ.

2024ರಲ್ಲಿ ಅದು ಈ ಸೂಚ್ಯಂಕದಲ್ಲಿ 80ನೇ ಸ್ಥಾನ ಹೊಂದಿತ್ತು. ಹಲವಾರು ವರ್ಷಗಳಿಂದ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿಯುತ್ತಲೇ ಬಂದಿದೆ. 2006ರಲ್ಲಿ, ಅದು ತನ್ನ ಗರಿಷ್ಠ ಸ್ಥಾನ 71ರಲ್ಲಿತ್ತು ಮತ್ತು 2021ರಲ್ಲಿ ಕನಿಷ್ಠ 90ಕ್ಕೆ ಕುಸಿದಿತ್ತು.

ಭಾರತೀಯ ಪಾಸ್‌ಪೋರ್ಟ್‌ದಾರರು ಈಗ 57 ದೇಶಗಳಿಗೆ ವೀಸಾರಹಿತ ಪ್ರಯಾಣ ಮಾಡಬಹುದಾಗಿದೆ. ಇದು ಕಳೆದ ವರ್ಷದ 59ರಿಂದ ಎರಡು ಸ್ಥಾನ ಕೆಳಗಿಳಿದಿದೆ.

193 ದೇಶಗಳಿಗೆ ವೀಸಾರಹಿತ ಪ್ರಯಾಣವನ್ನು ಖಾತರಿಪಡಿಸುವ ಸಿಂಗಾಪುರ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ದಕ್ಷಿಣ ಕೊರಿಯ ಮತ್ತು ಜಪಾನ್ ಇದೆ.

ಜರ್ಮನಿ, ಇಟಲಿ, ಸ್ಪೇನ್ ಮತ್ತು ಸ್ವಿಟ್ಸರ್‌ಲ್ಯಾಂಡ್ ಮುಂತಾದ ಯುರೋಪಿಯನ್ ದೇಶಗಳು ಸೂಚ್ಯಂಕದ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಅಮೆರಿಕವು ಮೊದಲ ಬಾರಿಗೆ ಸೂಚ್ಯಂಕದ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ.

ನಾಗರಿಕರಿಗೆ ನೀಡಲಾಗುವ ಸಾಮಾನ್ಯ ಪಾಸ್‌ಪೋರ್ಟ್‌ಗಳ ಮೂಲಕ ಎಷ್ಟು ದೇಶಗಳಿಗೆ ಮುಕ್ತವಾಗಿ ಸಂಚರಿಸುವ ಅವಕಾಶವಿದೆ ಎನ್ನುವುದನ್ನು ಆಧರಿಸಿ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ.

ಅದನ್ನು 2005ರಲ್ಲಿ ‘ಹೆನ್ಲಿ ಮತ್ತು ಪಾರ್ಟ್‌ನರ್ಸ್ ವೀಸಾ ನಿರ್ಬಂಧ ಸೂಚ್ಯಂಕ’ ಎಂಬ ಹೆಸರಿನಲ್ಲಿ ಆರಂಭಿಸಲಾಗಿತ್ತು. ಬಳಿಕ ಅದನ್ನು 2018 ಜನವರಿಯಲ್ಲಿ ‘ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ’ವಾಗಿ ಬದಲಾಯಿಸಲಾಯಿತು.

ಸೂಚ್ಯಂಕದ ಕೊನೆಯ ಸ್ಥಾನದಲ್ಲಿ ಅಫ್ಘಾನಿಸ್ತಾನವಿದೆ. ಆ ದೇಶದ ಪಾಸ್‌ಪೋರ್ಟ್‌ದಾರರಿಗೆ ಕೇವಲ 24 ದೇಶಗಳಿಗೆ ವಿಸಾರಹಿತ ಪ್ರವೇಶವಿದೆ.

ಪಾಕಿಸ್ತಾನ 103ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 100 ಮತ್ತು ನೇಪಾಳ 101ನೇ ಸ್ಥಾನಗಳಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News