ಶ್ರಮ ಸಾಂದ್ರ ವಲಯ ಉತ್ಪನ್ನಗಳ ಮೇಲೆ ಸುಂಕ ಕಡಿತಕ್ಕೆ ಭಾರತ ಮನವಿ
ಎಸ್.ಜೈಶಂಕರ್ | PC : PTI
ಹೊಸದಿಲ್ಲಿ: ಅಮೆರಿಕ ಜತೆಗಿನ ಯಾವುದೇ ವ್ಯಾಪಾರ ಒಪ್ಪಂದ ಪರಸ್ಪರ ಲಾಭ ತರುವಂತಿರಬೇಕು. ಉಭಯ ದೇಶಗಳು ಪರಸ್ಪರರಿಗೆ ನೆರವಾಗಿ ಪ್ರಯೋಜನ ಪಡೆಯುವ ಒಪ್ಪಂದದ ಅಗತ್ಯತೆಯನ್ನು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರತಿಪಾದಿಸಿದ್ದಾರೆ.
"ಸಾಕಷ್ಟು ಸಂಕೀರ್ಣ ಮಾತುಕತೆಗಳು ನಡೆಯುತ್ತಿವೆ. ಇವು ತೀರಾ ಜಟಿಲ ಹಾಗೂ ಯಾವುದೂ ಇದುವರೆಗೆ ನಿರ್ಧಾರವಾಗಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಅವರು ಅಮೆರಿಕದ ಪ್ರತಿನಿಧಿ ಜೆಮಿಸನ್ ಗ್ರೀರ್ ಮತ್ತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲ್ಯುಟ್ನಿಕ್ ಅವರ ಜತೆ ಮಾತುಕತೆ ನಡೆಸಲು ಮುಂದಾಗಿರುವ ಸಂದರ್ಭದಲ್ಲೇ ವಿದೇಶಾಂಗ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಯವುದೇ ವ್ಯಾಪಾರ ಒಪ್ಪಂದಗಳು ಉಭಯ ದೇಶಗಳಿಗೆ ಕಾರ್ಯಸಾಧುವಾಗಬೇಕು. ಇದು ವ್ಯಾಪಾರ ಒಪ್ಪಂದದ ಬಗೆಗಿನ ನಮ್ಮ ನಿರೀಕ್ಷೆ. ಅದು ಸಾಧ್ಯವಾಗುವವರೆಗೆ ಯಾವುದೇ ತೀರ್ಮಾನಗಳು ಪರಿಪಕ್ವ ಎನಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಬಗ್ಗೆ ಭಾರತದ ಮುಖ್ಯ ಸಂಧಾನಕಾರ ರಾಜೇಶ್ ಅಗರ್ವಾಲ್ ನೇತೃತ್ವದ ತಂಡ ಸುಂಕ ಕಡಿತ, ವ್ಯಾಪಾರೇತರ ತಡೆಗಳನ್ನು ಕಿತ್ತುಹಾಕುವುದು ಮೂಲ ನಿಯಮಗಳು ಸೇರಿದಂತೆ ವಿವರವಾದ ಚರ್ಚೆಗಳನ್ನು ನಡೆಸುತ್ತಿದೆ.
ಅಮೆರಿಕಕ್ಕೆ ಆಸಕ್ತಿ ಇರುವ ಹಲವು ಉತ್ಪನ್ನಗಳ ಮೇಲೆ ಕಡಿಮೆ ಸುಂಕ ವಿಧಿಸಬೇಕು ಹಾಗೂ ಶ್ರಮಸಾಂದ್ರ ವಲಯಗಳಾದ ಜವಳಿ ಮತ್ತು ಚರ್ಮೋದ್ಯಮದ ಉತ್ಪನ್ನಗಳ ಮೇಲಿನ ಸುಂಕ ಕಡಿತಗೊಳಿಸಬೇಕು ಎನ್ನುವುದು ಭಾರತದ ನಿರೀಕ್ಷೆಯಾಗಿದೆ. ಜೈಶಂಕರ್ ಅವರ ಹೇಳಿಕೆ ಇದರ ಸುಳಿವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.