×
Ad

ಚೀನಾದ ಪ್ರವಾಸಿಗರಿಗೆ ಸದ್ದಿಲ್ಲದೆ ವೀಸಾ ಸೇವೆಗಳನ್ನು ಪುನರಾರಂಭಿಸಿದ ಭಾರತ

Update: 2025-07-24 12:25 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಐದು ವರ್ಷಗಳ ನಂತರ, ಭಾರತವು ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ಸೇವೆ ಪುನರಾರಂಭ ಮಾಡುವ ನಿರ್ಧಾರ ಕೈಗೊಂಡಿದೆ. ಕೊರೋನಾ ಸಾಂಕ್ರಾಮಿಕದ ಆರಂಭದಲ್ಲಿ ಸ್ಥಗಿತಗೊಂಡ ಈ ಸೇವೆಗಳು 2020 ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಸ್ಥಗಿತಗೊಂಡಿದ್ದವು.

ಭಾರತದ ಈ ತೀರ್ಮಾನವನ್ನು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಚೀನಾದ ಮೈಕ್ರೋಬ್ಲಾಗಿಂಗ್ ತಾಣವಾದ Weiboಯಲ್ಲಿ ಮ್ಯಾಂಡರಿನ್ ಭಾಷೆಯಲ್ಲಿ ಪ್ರಕಟಿಸಿದೆ. ಇದನ್ನು ಸರ್ಕಾರ ಯಾವುದೇ ಅಧಿಕೃತ ಪತ್ರಿಕಾ ಪ್ರಕಟಣೆ ಅಥವಾ ವೆಬ್‌ಸೈಟ್ ನಲ್ಲಿ ಪ್ರಕಟಿಸಿಲ್ಲ.

ಈ ತಿಂಗಳ ಆರಂಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಿದ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಸರ್ಕಾರದ ಚೀನಾ ನೀತಿಯನ್ನು “ಪೂರ್ಣ ಪ್ರಮಾಣದ ಸರ್ಕಸ್” ಎಂದು ಟೀಕಿಸಿದ್ದರು.

ಭಾರತ ಸರ್ಕಾರದ ನಿರ್ಧಾರದ ಸುದ್ದಿಯನ್ನು ಪ್ರಕಟಿಸುತ್ತಾ, ಚೀನಾದ ರಾಷ್ಟ್ರೀಯ ಇಂಗ್ಲಿಷ್ ಪತ್ರಿಕೆ ಗ್ಲೋಬಲ್ ಟೈಮ್ಸ್ X ನಲ್ಲಿ ಪೋಸ್ಟ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದೆ.

“ಚೀನಾದಲ್ಲಿರುವ ಭಾರತದ ರಾಯಭಾರ ಕಚೇರಿಯು... ಜುಲೈ 24, 2025 ರಿಂದ, ಚೀನಾದ ನಾಗರಿಕರು ಆನ್‌ಲೈನ್ ಅರ್ಜಿಯನ್ನು ಪೂರ್ಣಗೊಳಿಸಿ, ಅಪಾಯಿಂಟ್‌ಮೆಂಟ್ ನಿಗದಿಪಡಿಸಿದ ನಂತರ ಮತ್ತು ಬೀಜಿಂಗ್, ಶಾಂಘೈ ಮತ್ತು ಗುವಾಂಗ್‌ಝೌದಲ್ಲಿನ ಭಾರತೀಯ ವೀಸಾ ಅರ್ಜಿ ಕೇಂದ್ರಗಳಿಗೆ ತಮ್ಮ ಪಾಸ್‌ಪೋರ್ಟ್ ಮತ್ತು ಇತರ ಅಗತ್ಯ ದಾಖಲೆಗಳನ್ನು ವೈಯಕ್ತಿಕವಾಗಿ ಸಲ್ಲಿಸಿದ ನಂತರ ಭಾರತಕ್ಕೆ ಭೇಟಿ ನೀಡಲು ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಘೋಷಿಸಿತು....” ಎಂದು ಪೋಸ್ಟ್ ನಲ್ಲಿ ತಿಳಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಈ ಕ್ರಮವನ್ನು ಸ್ವಾಗತಿಸಿ, “ಪ್ರವಾಸಗರಿಗೆ ಈ ಕ್ರಮವು ಸಹಾಯಕವಾಗಿದೆ. ಭಾರತದೊಂದಿಗೆ ಸಂವಹನ ಹಾಗೂ ಸಮಾಲೋಚನೆಯ ಮೂಲಕ ನಾವು ಮುಂದುವರೆಯುತ್ತೇವೆ,” ಎಂದು ತಿಳಿಸಿದರು.

ಇತ್ತೀಚಿನ ಕೆಲ ಬೆಳವಣಿಗೆಗಳು, ಹಳೆಯ ಸಂಬಂಧ ಪುನರ್ ಸ್ಥಾಪನೆಗೆ ದಾರಿ ಮಾಡಿಕೊಡುತ್ತಿವೆ. ಇವುಗಳಲ್ಲಿ ಕಳೆದ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆಗೆ ಮರು ಅನುಮತಿ, ನೇರ ವಿಮಾನ ಸಂಚಾರದ ಚರ್ಚೆ ಮುಂತಾದವು ಸೇರಿವೆ.

ವೀಸಾ ಸೇವೆಗಳ ಪುನರಾರಂಭವು ಭಾರತ-ಚೀನಾ ನಡುವಿನ ಜನರಿಂದ ಜನಕ್ಕೆ ಸಂಬಂಧವನ್ನು ಪುನಃ ಸ್ಥಾಪಿಸಲು ಸಹಾಯಕವಾಗಲಿದೆ. ಗಡಿ ವಿವಾದಗಳ ಮಧ್ಯೆ, ರಾಜತಾಂತ್ರಿಕ ಮಟ್ಟದಲ್ಲಿ ಈ ರೀತಿಯ ವಿನಿಮಯಗಳು ಸಹಕಾರದ ಸಂಕೇತವಾಗಿವೆ ಎಂದು ರಾಜಕೀಯ ವಿಶ್ಲೇಷಕಕರು ಅಭಿಪ್ರಾಯಪಟ್ಟಿದ್ದಾರೆ.

ದ್ವಿಪಕ್ಷೀಯ ಸಂಪರ್ಕಗಳ ಪುನರಾರಂಭವು 1993ರ ಗಡಿ ಶಾಂತಿ ಒಪ್ಪಂದವನ್ನು ಮತ್ತೆ ಜೀವಂತಗೊಳಿಸಲು ಪ್ರಯತ್ನಿಸುತ್ತಿದೆ. ಈ ಬೆಳವಣಿಗೆಗಳು ಸಹಕಾರ ಮತ್ತು ನಂಬಿಕೆಯ ಹೊಸ ಅಧ್ಯಾಯಕ್ಕೆ ದಾರಿ ಹಾಕಬಹುದೆಂದು ನಿರೀಕ್ಷಿಸಲಾಗಿದೆ .

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News