ಜಾಗತಿಕ ಸ್ಥಿರತೆ, ಆರ್ಥಿಕ ಪ್ರಗತಿಗೆ ಭಾರತ-ಬ್ರಿಟನ್ ಬಾಂಧವ್ಯ ಆಧಾರಸ್ತಂಭ : ಪ್ರಧಾನಿ ಮೋದಿ
460 ಮಿಲಿಯನ್ ಡಾಲರ್ ಮೌಲ್ಯದ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ-ಬ್ರಿಟನ್ ಸಹಿ
Photo Credi : PTI
ಮುಂಬೈ,ಅ.9: ಭಾರತ ಹಾಗೂ ಬ್ರಿಟನ್ ‘ಸಹಜ ಪಾಲುದಾರ’ರಾಗಿದ್ದು, ಉಭಯದೇಶಗಳ ನಡುವೆ ಹೆಚ್ಚುತ್ತಿರುವ ಬಾಂಧವ್ಯವು ಜಾಗತಿಕ ಸ್ಥಿರತೆ ಹಾಗೂ ಆರ್ಥಿಕ ಪ್ರಗತಿಗೆ ಒಂದು ಪ್ರಮುಖ ಆಧಾರಸ್ತಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಿಳಿಸಿದ್ದಾರೆ.
ಬ್ರಿಟನ್ ಪ್ರಧಾನಿ ಕಿರ್ ಸ್ಟಾರ್ಮರ್ ಜೊತೆ ಗುರುವಾರ ವಿಸ್ತೃತ ಮಾತುಕತೆಗಳನ್ನು ನಡೆಸಿದ ಬಳಿಕ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜುಲೈಯಲ್ಲಿ ಭಾರತ ಹಾಗೂ ಬ್ರಿಟನ್ ಸಹಿ ಮಾಡಿರುವ ಆರ್ಥಿಕ ಹಾಗೂ ವ್ಯಾಪಾರ ಒಪ್ಪಂದವು ಎರಡೂ ದೇಶಗಳ ನಡುವಿನ ಅಮದು ವೆಚ್ಚವನ್ನು ಕಡಿಮೆಗೊಳಿಸಲಿದೆ ಮತ್ತು ನೂತನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಹಾಗೂ ಕೈಗಾರಿಕೆಗಳು ಮತ್ತು ಗ್ರಾಹಕರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
ಉಕ್ರೇನ್ ಸಂಘರ್ಷ ಹಾಗೂ ಗಾಝಾ ಬಿಕ್ಕಟ್ಟಿಗೆ ಸಂಬಂಧಿಸಿ ವಿಷಯಗಳಲ್ಲಿ ಮಾತುಕತೆ ಹಾಗೂ ರಾಜತಾಂತ್ರಿಕತೆ ಮೂಲಕ ಶಾಂತಿಯನ್ನು ಮರುಸ್ಥಾಪಿಸುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸಲಿದೆ ಎಂದು ಮೋದಿ ತಿಳಿಸಿದರು. ಇಂಡೋ-ಪೆಸಿಫಿಕ್ ಪ್ರಾಂತದಲ್ಲಿ ನೌಕಾಯಾನ ಭದ್ರತಾ ಸಹಕಾರವನ್ನು ವೃದ್ಧಿಸುವ ವಿಚಾರದಲ್ಲಿ ಭಾರತ ಸಂಪೂರ್ಣ ಬದ್ಧತೆಯನ್ನು ಹೊಂದಿರುವುದಾಗಿ ಅವರು ಹೇಳಿದರು.
ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರು ಮಾತನಾಡಿ ಗಾಝಾದಲ್ಲಿ ಜಾರಿಗೊಂಡಿರುವ ಹಮಾಸ್-ಇಸ್ರೇಲ್ ನಡುವಿನ ಮೊದಲ ಹಂತದ ಶಾಂತಿ ಯೋಜನೆಯನ್ನು ಸ್ವಾಗತಿಸಿದರು. ಕಳೆದ ಎರಡು ವರ್ಷಗಳಿಂದ ಕಲ್ಪನೆಗೂ ಮೀರಿದ ಯಾತನೆಯನ್ನು ಅನುಭವಿಸಿದವರು ಅದರಲ್ಲೂ ವಿಶೇಷವಾಗಿ ಒತ್ತೆಯಾಳುಗಳು, ಗಾಝಾದ ನಾಗರಿಕರು, ಅವರ ಕುಟುಂಬಗಳಿಗೆ ನಿರಾಳತೆಯನ್ನುಂಟು ಮಾಡಿದ ಕ್ಷಣ ಇದಾಗಿದೆ. ಈ ನಿಟ್ಟಿನಲ್ಲಿ ಈಜಿಪ್ಟ್, ಖತರ್, ತುರ್ಕಿಯೆ ಹಾಗೂ ಅಮೆರಿಕವು ನಡೆಸಿದ ಅವಿಶ್ರಾಂತ ರಾಜತಾಂತ್ರಿಕ ಪ್ರಯತ್ನಗಳಿಗೆ ನಾವು ಕೃತಜ್ಞರಾಗಿದ್ದೇವೆ’’ ಎಂದು ಸ್ಟಾರ್ಮರ್ ತಿಳಿಸಿದರು. ಗಾಝಾದಲ್ಲಿ ಜೀವರಕ್ಷಕ ಮಾನವೀಯ ನೆರವಿನ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧಗಳನ್ನು ರದ್ದುಗೊಳಿಸುವಂತೆಯೂ ಅವರು ಕರೆ ನೀಡಿದರು.
ಭಾರತವು ಜಾಗತಿಕವಾಗಿ ನಿರ್ಣಾಯಕ ಪಾತ್ರವನ್ನು ಹೊಂದಿದ್ದು, ಕಾಮನ್‌ವೆಲ್ತ್, ಜಿ20 ಶೃಂಗಸಭೆಯಲ್ಲಿ ನಾವೆರಡೂ ದೇಶಗಳು ಜೊತೆಯಾಗಿರುತ್ತೇವೆ. ಹಾಗೆಯೇ ವಿಶ್ವಸಂಸ್ಥೆಯ ಭದ್ರತಾ ಮಂಜಳಿಯಲ್ಲಿಯೂ ಭಾರತಕ್ಕೆ ಸೂಕ್ತ ಸ್ಥಾನ ದೊರೆಯುವುದನ್ನು ಬ್ರಿಟನ್ ನೋಡಬಯಸುತ್ತದೆ ಎಂದರು.
ಜಂಟಿ ಪತ್ರಿಕಾಗೋಷ್ಠಿಗೆ ಮುನ್ನ ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಉಭಯ ನಾಯಕರು ಇಂಡೋ-ಪೆಸಿಫಿಕ್ ಪರಿಸ್ಥಿತಿ, ಪಶ್ಚಿಮ ಏಶ್ಯದಲ್ಲಿ ಶಾಂತಿ ಹಾಗೂ ಸ್ಥಿರತೆ ಮತ್ತು ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚಿಸಿದರು.
ಬ್ರಿಟನ್‌ನ ಉದ್ಯಮ, ಶಿಕ್ಷಣ ಹಾಗೂ ಸಾಂಸ್ಕೃತಿಕ ನಾಯಕರನ್ನು ಒಳಗೊಂಡ 126 ಸದಸ್ಯರ ನಿಯೋಗದ ನೇತೃತ್ವವನ್ನು ಪ್ರಧಾನಿ ಸ್ಟಾರ್ಮರ್ ವಹಿಸಿದ್ದಾರೆ.
460 ಮಿಲಿಯನ್ ಡಾಲರ್ ಮೌಲ್ಯದ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ-ಬ್ರಿಟನ್ ಸಹಿ
ಭಾರತ ಹಾಗೂ ಬ್ರಿಟನ್ 460 ಮಿಲಿಯನ್ ಡಾಲರ್ ಮೊತ್ತದ ಕ್ಷಿಪಣಿ ಒಪ್ಪಂದಕ್ಕೆ ಸಹಿಹಾಕಿದ್ದು, ಅದರಂತೆ ಭಾರತೀಯ ಸೇನೆಯು ಬ್ರಿಟನ್ ನಿರ್ಮಿತ ಅತ್ಯಾಧುನಿಕ ಕ್ಷಿಪಣಿಗಳನ್ನು ಪಡೆಯಲಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಕಿರ್ ಸ್ಟಾರ್ಮರ್ ಮುಂಬೈಯಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಈ ಕ್ಷಿಪಣಿ ಪೂರೈಕೆ ಯೋಜನೆಯು ಉತ್ತರ ಐಯರ್‌ಲ್ಯಾಂಡ್‌ನಲ್ಲಿ 700ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.
ಬ್ರಿಟನ್ ಪ್ರಧಾನಿ ಕಿರ್ ಸ್ಟಾರ್ಮರ್ ಅವರು ಭಾರತಕ್ಕೆ ಚೊಚ್ಚಲ ಪ್ರವಾಸದ ದ್ವಿತೀಯ ಹಾಗೂ ಅಂತಿಮ ಪ್ರವಾಸದ ಸಂದರ್ಭದಲ್ಲಿ ಈ ಬ್ರಿಟನ್ ರಕ್ಷಣಾ ಸಚಿವಾಲಯ ಈ ಘೋಷಣೆ ಮಾಡಿದೆ.
ಈ ಒಪ್ಪಂದದ ಅನ್ವಯ ಬ್ರಿಟನ್ ಭಾರತಕ್ಕೆ ಲಘುಭಾರದ ಮಲ್ಟಿರೋಲ್ ಕ್ಷಿಪಣಿ (ಎಲ್‌ಎಂಎಂ)ಗಳನ್ನು ನಿರ್ಮಿಸಲಿದ್ದು, ಬ್ರಿಟನ್ ರಕ್ಷಣಾ ಕೈಗಾರಿಕೆಗೆ ಮಹತ್ವದ ಉತ್ತೇಜನ ನೀಡಲಿದೆ’ ಎಂದು ಬ್ರಿಟನ್ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
‘‘ಈ ಒಪ್ಪಂದವು ಎರಡೂ ದೇಶಗಳ ನಡುವೆ ವಿಶಾಲವಾದ ಸಂಕೀರ್ಣ ಆಯುಧಗಳ ಪಾಲುದಾರಿಕೆಗೆ ದಾರಿ ಮಾಡಿಕೊಡಲಿದೆ’’ ಎಂದು ಹೇಳಿಕೆ ತಿಳಿಸಿದೆ.
ಭಾರತ- ಬ್ರಿಟನ್ ನಡುವೆ ದ್ವಿಪಕ್ಷೀಯ ಒಪ್ಪಂದಗಳು
· ಮಿಲಿಟರಿ ತರಬೇತಿ ಕುರಿತು ಉಭಯದೇಶಗಳ ನಡುವೆ ಏರ್ಪಟ್ಟ ಒಪ್ಪಂದದಡಿ ಭಾರತೀಯ ವಾಯುಪಡೆಯ ವಿಮಾನ ಹಾರಾಟ ತರಬೇತಿ ಶಿಕ್ಷಕರು, ಭಾರತೀಯ ರಾಯಲ್ ವಾಯುಪಡೆಯ ತರಬೇತುದಾರರಾಗಿಯೂ ಕೆಲಸ ಮಾಡಲಿದ್ದಾರೆ.
· ಬ್ರಿಟನ್‌ನ 9 ವಿಶ್ವವಿದ್ಯಾನಿಲಯಗಳು, ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ತೆರೆಯಲಿವೆ.
· 64 ಭಾರತೀಯ ಕಂಪೆನಿಗಳಿಂದ ಬ್ರಿಟನ್‌ನಲ್ಲಿ 1.75 ಶತಕೋಟಿ ಡಾಲರ್ ಹೂಡಿಕೆ.
· ತಂತ್ರಜ್ಞಾನ, ಶಿಕ್ಷಣ, ಎಐ ಹಾಗೂ ರಕ್ಷಣಾ ಕ್ಷೇತ್ರದ ವಿವಿಧ ವಲಯಗಳಲ್ಲಿ ಉಭಯ ದೇಶಗಳ ನಡುವೆ ಸಹಕಾರ
ಹವಾಮಾನ ತಂತ್ರಜ್ಞಾನ ಸ್ಟಾರ್ಟ್‌ಅಪ್ ನಿಧಿಯಲ್ಲಿ ಉಭಯ ದೇಶಗಳಿಂದ ಜಂಟಿ ಹೂಡಿಕೆ.
ಭಾರತ- ಬ್ರಿಟನ್ ಸಂಪರ್ಕಶೀಲತೆ ಹಾಗೂ ಅನ್ವೇಷಣೆ ಕೇಂದ್ರ ಹಾಗೂ ಎಐ ಕುರಿತ ಜಂಟಿ ಕೇಂದ್ರ ಸ್ಥಾಪನೆ.