ಮಸೂದ್ ಅಝರ್, ಹಫೀಝ್ ಸಯೀದ್ ರನ್ನು ಹಸ್ತಾಂತರಿಸಿ ಪಾಕ್ ಗೆ ಭಾರತ ಒತ್ತಾಯ
ಮಸೂದ್ ಅಝರ್ ಮತ್ತು ಹಫೀಝ್ ಸಯೀದ್ | PC : Youtube
ಹೊಸದಿಲ್ಲಿ: ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸುತ್ತಿರುವ ವಿರುದ್ಧ ಪಾಕಿಸ್ತಾನಕ್ಕೆ ಕಟು ಎಚ್ಚರಿಕೆ ನೀಡಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಭಯೋತ್ಪಾದಕರಾದ ಮಸೂದ್ ಅಝರ್ ಮತ್ತು ಹಫೀಝ್ ಸಯೀದ್ ರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ.
ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ನೌಕಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ಸ್ವಾತಂತ್ರ್ಯ ಸಿಕ್ಕಿದಂದಿನಿಂದಲೂ ಪಾಕಿಸ್ತಾನ ಆಡಿಕೊಂಡು ಬರುತ್ತಿರುವ ಅಪಾಯಕಾರಿ ಭಯೋತ್ಪಾದನೆಯ ಆಟ ಈಗ ಮುಕ್ತಾಯಗೊಂಡಿದೆ ಎನ್ನುವುದನ್ನು ಪಾಕಿಸ್ತಾನ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ’’ ಎಂದು ಹೇಳಿದರು.
ಭಯೋತ್ಪಾದನೆಗೆ ಭಾರತದ ಶೂನ್ಯ ಸಹನೆ ನೀತಿಯನ್ನು ಪುನರುಚ್ಚರಿಸಿದ ಅವರು, ಈ ಬೆದರಿಕೆಯನ್ನು ಎದುರಿಸಲು ದೇಶವು ಲಭ್ಯವಿರುವ ಸರ್ವ ಸಂಪನ್ಮೂಲಗಳನ್ನು ಬಳಸುತ್ತದೆ ಎಂದರು.
► ಉಗ್ರರ ವಿರುದ್ಧ ಕ್ರಮ ತೆಗೆದುಕೊಂಡಾಗ ಮಾತ್ರ ಪಾಕ್ ಜೊತೆ ಮಾತುಕತೆ: ಭಾರತ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಕಟು ಎಚ್ಚರಿಕೆಯನ್ನು ನೀಡಿರುವ ಭಾರತ, ಗಡಿಯಾಚೆಯ ಭಯೋತ್ಪಾದನೆಯನ್ನು ನಿಲ್ಲಿಸಲು ಪಾಕಿಸ್ತಾನವು ಸದೃಢ ಕ್ರಮಗಳನ್ನು ತೆಗೆದುಕೊಂಡಾಗ ಮಾತ್ರ ಆ ದೇಶದೊಂದಿಗೆ ಮಾತುಕತೆ ಸಾಧ್ಯವಾಗುತ್ತದೆ ಎಂದು ಹೇಳಿದೆ.
ಕಾಶ್ಮೀರ, ಭಯೋತ್ಪಾದನೆ, ನೀರು ಮತ್ತು ವ್ಯಾಪಾರ ಸೇರಿದಂತೆ ಎಲ್ಲಾ ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸುವ ಬಯಕೆಯನ್ನು ಪಾಕಿಸ್ತಾನಿ ಪ್ರಧಾನಿ ಶೆಹ್ಬಾಝ್ ಶರೀಫ್ ವ್ಯಕ್ತಪಡಿಸಿದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ.
‘‘ಭಯೋತ್ಪಾದನೆ ಮತ್ತು ಮಾತುಕತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎನ್ನುವುದನ್ನು ನಾವು ಪುನರುಚ್ಚರಿಸುತ್ತೇವೆ’’ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ತನ್ನ ವಾರದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಸ್ತಾಂತರಿಸುವುದು ಮತ್ತು ಭಯೋತ್ಪಾದನೆ ವಿಷಯಗಳ ಬಗ್ಗೆ ಮಾತ್ರ ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದು ಎಂದು ಜೈಸ್ವಾಲ್ ನುಡಿದರು.