ಭಾರತದ ವೈಮಾನಿಕ ದಾಳಿಯಲ್ಲಿ ಜೈಶೆ ಮುಖ್ಯಸ್ಥ ಮಸೂದ್ ಅಝರ್ ಕುಟುಂಬದ 10 ಮಂದಿ ಬಲಿ: ವರದಿ
ಮಸೂದ್ ಅಝರ್ (Photo credit: The Hindu)
ಹೊಸದಿಲ್ಲಿ: ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ತನ್ನ ಕುಟುಂಬದ 10 ಮಂದಿ ಸದಸ್ಯರು ಮತ್ತು ನಾಲ್ವರು ಆಪ್ತ ಸಹಚರರು ಮೃತಪಟ್ಟಿದ್ದಾರೆ ಎಂದು ಜೈಶೆ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಹೇಳಿರುವುದಾಗಿ hindustantimes ವರದಿ ಮಾಡಿದೆ.
ಬಹಾವಲ್ಪುರದ ಜೈಶೆ ಮೊಹಮ್ಮದ್‌ಗೆ ಸೇರಿದ ನೆಲೆಗಳು ಸೇರಿದಂತೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಭಯೋತ್ಪಾದಕರ 9 ತಾಣಗಳನ್ನು ಗುರುತಿಸಿ ಭಾರತ ವೈಮಾನಿಕ ದಾಳಿ ನಡೆಸಿತ್ತು.
ʼಬಹಾವಲ್ಪುರದ ʼಮಾರ್ಕಾಝ್ ಸುಭಾನ್ ಅಲ್ಲಾʼ ಮೇಲೆ ಭಾರತ ನಡೆಸಿದ ದಾಳಿಯಲ್ಲಿ 10 ಮಂದಿ ಕುಟುಂಬಸ್ಥರು ಮತ್ತು ನಾಲ್ವರು ಆಪ್ತರು ಮೃತಪಟ್ಟಿದ್ದಾರೆ. ಈ ಕ್ರೌರ್ಯ ಎಲ್ಲಾ ಮಿತಿಗಳನ್ನು ಮುರಿದಿದೆ. ಈಗ ಯಾರೂ ಕರುಣೆಯನ್ನು ನಿರೀಕ್ಷಿಸಬಾರದುʼ ಎಂದು ಜೈಶೆ ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಅಝರ್ ತನ್ನ ಸಹೋದರಿ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಪತ್ನಿ ಮತ್ತು ಓರ್ವ ಸೊಸೆ ಸೇರಿದಂತೆ 10 ಮಂದಿ ಕುಟುಂಬಸ್ಥರನ್ನು ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.