ಅಮೆರಿಕದಿಂದ ಗಡೀಪಾರಿಗೊಳಗಾಗಿರುವ ಬಹುತೇಕ ಭಾರತೀಯರು ಯೂರೋಪ್ ಮೂಲಕ ಡಂಕಿ ಮಾರ್ಗ ಆಯ್ದುಕೊಂಡಿದ್ದೇಕೆ?
ಹೊಸದಿಲ್ಲಿ: ಅಮೆರಿಕವನ್ನು ಅಕ್ರಮ ವಲಸೆ ಮುಕ್ತ ದೇಶವನ್ನಾಗಿಸಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೆಬ್ರವರಿ ತಿಂಗಳಲ್ಲಿ ಇದುವರೆಗೆ ಮೂರು ಬಾರಿ ಅಕ್ರಮ ಭಾರತೀಯ ವಲಸಿಗರನ್ನು ಭಾರತಕ್ಕೆ ಸೇನಾ ವಿಮಾನದಲ್ಲಿ ಗಡೀಪಾರು ಮಾಡಿದ್ದಾರೆ. ಹೀಗೆ ಗಡೀಪಾರಿಗೊಳಗಾಗಿರುವ ಅನೇಕರು ನಾವು ಅಮೆರಿಕವನ್ನು ಪ್ರವೇಶಿಸಲು ಸಾಮಾನ್ಯವಾಗಿ ಜನರು ಬಳಸುವ ಲ್ಯಾಟಿನ್ ಅಮೆರಿಕದಿಂದ ಕೇಂದ್ರ ಅಮೆರಿಕವನ್ನು ತಲುಪುವ ಡಂಕಿ ಮಾರ್ಗವನ್ನು ಬಳಸಲಿಲ್ಲ ಎಂಬ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ.
ಬದಲಿಗೆ, ಈ ಮುನ್ನ ವರ್ಗಾವಣೆ ಬಿಂದುಗಳಾಗಿದ್ದ ದಕ್ಷಿಣ ಅಮೆರಿಕ ದೇಶಗಳನ್ನು ತಪ್ಪಿಸಿ, ಯೂರೋಪ್ ಮೂಲಕ ಕೇಂದ್ರ ಅಮೆರಿಕಕ್ಕೆ ತಲುಪಿದೆವು ಎಂದು ಅವರು ತಿಳಿಸಿದ್ದಾರೆ. ಅದಕ್ಕಿರುವ ಪ್ರಮುಖ ಕಾರಣ ಕಡಿಮೆ ಅಪಾಯದ ಸಾಧ್ಯತೆ.
ಸಾಮಾನ್ಯವಾಗಿ ಅಮೆರಿಕ ಪ್ರವೇಶಿಸಲು ಮಾನ್ಯತೆ ಹೊಂದಿರುವ ದಾಖಲಾತಿಗಳಿಲ್ಲದ ಭಾರತೀಯರು ಕೇಂದ್ರ ಅಮೆರಿಕ(ಪನಾಮ, ಗ್ವಾಟೆಮಾಲದಂತಹ ದೇಶಗಳು)ವನ್ನು ಪ್ರವೇಶಿಸಲು ದಕ್ಷಿಣ ಅಮೆರಿಕ ದೇಶಗಳಾದ ಬ್ರೆಝಿಲ್, ಈಕ್ವೆಡಾರ್ ಅಥವಾ ಕೊಲಂಬಿಯಾ ಮೂಲಕ ತೆರಳುತ್ತಾರೆ. ಇದಕ್ಕಿರುವ ಕಾರಣ, ಮೆಕ್ಸಿಕೊಗೆ ನೇರ ವೀಸಾ ಪಡೆಯುವುದು ಕಷ್ಟಕರವಾಗಿರುವುದು ಹಾಗೂ ಅಲ್ಲಿ ಬಿಗಿ ಭದ್ರತೆ ಇರುವುದರಿಂದ, ಸ್ಥಳೀಯ ಪ್ರಾಧಿಕಾರಗಳಿಂದ ಬಂಧನಕ್ಕೊಳಗಾಗುವ ಸಾಧ್ಯತೆ ಇರುವುದು.
ಕೇಂದ್ರ ಅಮೆರಿಕ ಮೂಲಕ ಮೆಕ್ಸಿಕೊ ತಲುಪುವ ಇಂಥವರು, ಅಲ್ಲಿ ಗಡಿಯನ್ನು ದಾಟಲು ಪ್ರಯತ್ನಿಸುತ್ತಾರೆ. ಆದರೀಗ ಈ ಪೈಕಿ ಬಹುತೇಕರು ಮೊದಲು ಬ್ರಿಟನ್, ಇಟಲಿ, ಜರ್ಮನಿ, ಸ್ಪೇನ್ ಹಾಗೂ ಟರ್ಕಿಯಂತಹ ದೇಶಗಳಿಗೆ ತೆರಳುತ್ತಾರೆ. ನಂತರ, ವರ್ಗಾವಣೆ ಅಥವಾ ಸಂದರ್ಶಕರ ವೀಸಾದ ಮೇಲೆ ಕೇಂದ್ರ ಅಮೆರಿಕದತ್ತ ಮುಖ ಮಾಡುತ್ತಾರೆ.
ಯೂರೋಪಿಯನ್ ಮಾರ್ಗವು ಜನರನ್ನು ಪನಾಮ ಕಾಡಿನ ಮೂಲಕ ಕರೆದೊಯ್ಯುವ ಮಾರ್ಗಕ್ಕಿಂತ ತ್ವರಿತ ಹಾಗೂ ಕಡಿಮೆ ಅಪಾಯಕಾರಿ ಪರ್ಯಾಯ ಮಾರ್ಗವಾಗಿರುವುದರಿಂದ ಹೆಚ್ಚು ಜನಪ್ರಿಯವಾಗಿದೆ. ವಲಸಿಗರು ತಮ್ಮ ಬಹುತೇಕ ಪ್ರಯಾಣದ ಅವಧಿಯನ್ನು ವಾಯು ಮಾರ್ಗದ ಮೂಲಕ ಸಂಚರಿಸಿ, ನಂತರ ನಿಕರಾಗುವ ಮತ್ತು ಎಲ್ ಸಲ್ವಾಡೋರ್ ನಡುವಿನ ಮಾರ್ಗವನ್ನು ಕಾರು ಅಥವಾ ನಡಿಗೆಯ ಮೂಲಕ ಕ್ರಮಿಸಬೇಕಾಗುತ್ತದೆ. ಇದು ಹೆಚ್ಚು ಸುರಕ್ಷಿತ ಹಾಗೂ ಕಡಿಮೆ ಅಪಾಯಕಾರಿಯಾಗಿದೆ. ಈ ಕಾರಣದಿಂದ ಅಮೆರಿಕವನ್ನು ಪ್ರವೇಶಿಸಲು ಬಯಸುವವರಿಗೆ ಈ ಮಾರ್ಗ ಹೆಚ್ಚು ಸುರಕ್ಷಿತ ಹಾಗೂ ತ್ವರಿತ ಎಂಬ ಭಾವನೆಯನ್ನು ಮೂಡಿಸಿದೆ.
ವಿವಿಧ ಯೂರೋಪಿಯನ್ ದೇಶಗಳಲ್ಲಿ ಪ್ರಯಾಣ ಮಾಡಲು ಅವಕಾಶ ನೀಡುವ ತಾತ್ಕಾಲಿಕ ಸಂದರ್ಶಕರ ವೀಸಾವನ್ನು ಈ ವಲಸಿಗರು ಪಡೆಯುತ್ತಾರೆ. ತಾತ್ಕಾಲಿಕವಾಗಿ ಪ್ರಯಾಣಿಸುವ ದೇಶಗಳಿಗೆ ವೀಸಾ ಪಡೆಯುವುದು ಸಾಮಾನ್ಯವಾಗಿ ಸುಲಭವಾದರೂ, ಮುಂದಿನ ಹಂತದಲ್ಲಿ ಅವರ ಅರ್ಜಿಗಳನ್ನು ಮರು ಪರಿಶೀಲನೆಗೆ ಒಳಪಡಿಸಬಹುದಾಗಿದೆ.
ಯೂರೋಪ್ ತಲುಪಿದ ನಂತರ ಅವರಿಗೆ ತಮ್ಮ ಪ್ರಯಾಣವನ್ನು ಯೋಜಿಸಲು ಸಾಕಷ್ಟು ಸಮಯಾವಕಾಶ ದೊರೆಯುತ್ತದೆ. ಬ್ರಿಟನ್ ಗೆ ಮಾನ್ಯತೆ ಹೊಂದಿರುವ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ವೀಸಾಗಳನ್ನೂ ಬಳಸಲಾಗುತ್ತದೆ.
ಯೂರೋಪಿಯನ್ ಹಾಗೂ ಪನಾಮಾ ಮಾರ್ಗಗಳಿಗೆ ತಗಲುವ ವೆಚ್ಚಗಳೆರಡೂ ಒಂದೇ ಆಗಿವೆ. ಯೂರೋಪ್ ಅಥವಾ ಪನಾಮಗಳಲ್ಲಿನ ಸ್ಥಳೀಯ ಏಜೆಂಟರೊಂದಿಗೆ ಏಜೆಂಟ್ ಗಳು ಹೊಂದಿರುವ ಸಂಪರ್ಕ ಜಾಲಗಳನ್ನು ಆಧರಿಸಿ ವಲಸಿಗರ ಮಾರ್ಗಗಳ ಆಯ್ಕೆ ನಿರ್ಧಾರವಾಗುತ್ತದೆ.
ಈ ಏಜೆಂಟ್ ಗಳ ಪ್ರಕಾರ, ಯೂರೋಪಿಯನ್ ವೀಸಾ ಪಡೆದು, ವಿವಿಧ ದೇಶಗಳ ನಡುವೆ ವಿಮಾನಗಳನ್ನು ಕಾಯ್ದಿರಿಸುವುದು ದುಬಾರಿಯಾಗಿದೆ. ಇದರ ಪರಿಣಾಮವಾಗಿ, ವಲಸಿಗರು ತಮ್ಮ ಪ್ರಯಾಣಕ್ಕೆ ಗಮನಾರ್ಹ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಸರಾಸರಿ ಆಧಾರದಲ್ಲಿ ಪ್ರತಿಯೊಬ್ಬ ವ್ಯಕ್ತಿ ತಲಾ 40-60 ಲಕ್ಷ ರೂ. ವ್ಯಯಿಸಬೇಕಾಗುತ್ತದೆ. ಕೆಲವೊಮ್ಮೆ ವಸತಿ, ವೀಸಾಗಳು, ಟಿಕೆಟ್ ಗಳು ಇತ್ಯಾದಿಗಳ ವೆಚ್ಚ ಸೇರಿ ಈ ವೆಚ್ಚವು ನೈಜ ವೆಚ್ಚಕ್ಕಿಂತ ಹಲವು ಪಟ್ಟು ದುಬಾರಿಯಾಗುತ್ತದೆ.
ಆದರೆ, ಅಮೆರಿಕಕ್ಕೆ ವಲಸೆ ಹೋಗುವುದರಿಂದ ತಮ್ಮ ಹಣಕಾಸು ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ವಿಶ್ವಾಸ ಹಾಗೂ ಒಮ್ಮೆ ಅಮೆರಿಕ ತಲುಪಿದರೆ ದೊಡ್ಡ ಮೊತ್ತದ ಗಳಿಕೆ ಸಾಧ್ಯವಾಗುತ್ತದೆ ಎಂಬ ಭರವಸೆಯಿಂದ ಡಂಕಿ ಮಾರ್ಗಗಳನ್ನು ಆಯ್ದುಕೊಳ್ಳುವ ವಲಸಿಗರು ಪ್ರಯಾಣ ಬೆಳೆಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಸಾಕಷ್ಟು ಸುರಕ್ಷಿತ ಹಾಗೂ ತ್ವರಿತ ಮಾರ್ಗದ ಭರವಸೆ ನೀಡುವ ಏಜೆಂಟ್ ಗಳನ್ನು ನಂಬುವ ಅವರು, ಹೆಚ್ಚು ಶುಲ್ಕ ಪಾವತಿಸಲೂ ಸಿದ್ಧರಾಗಿರುತ್ತಾರೆ. ಅದರಂತೆ ಏಜೆಂಟ್ ಗಳೂ ಕೂಡಾ ತೀರಾ ದುಬಾರಿ ಶುಲ್ಕ ವಿಧಿಸುತ್ತಾರೆ.
ಸೌಜನ್ಯ: indianexpress.com