2024ರಲ್ಲಿ ತಿರಸ್ಕೃತ ಷೆಂಗೆನ್ ವೀಸಾಗಳಿಂದಾಗಿ ಭಾರತೀಯರಿಗೆ 136 ಕೋಟಿ ರೂ. ನಷ್ಟ: ವರದಿ
ಸಾಂದರ್ಭಿಕ ಚಿತ್ರ PC: istockphoto
ಹೊಸದಿಲ್ಲಿ: ಕಾಂಡೆ ನಾಸ್ಟ್ ಟ್ರಾವೆಲರ್ ವರದಿಯ ಪ್ರಕಾರ 2024ರಲ್ಲಿ 1.65 ಲಕ್ಷ ಕ್ಕೂ ಅಧಿಕ ಷೆಂಗೆನ್ ವೀಸಾ ಅರ್ಜಿಗಳು ತಿರಸ್ಕರಿಸಲ್ಪಟ್ಟಿದ್ದರಿಂದ ಭಾರತೀಯರು ಶುಲ್ಕಗಳ ರೂಪದಲ್ಲಿ 136 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಕಳೆದುಕೊಂಡಿದ್ದಾರೆ.
ಕಳೆದ ವರ್ಷ ಷೆಂಗೆನ್ ವೀಸಾ ನಿರಾಕರಣೆಗಳಿಂದಾಗಿ ಅಲ್ಜೀರಿಯಾ ಮತ್ತು ತುರ್ಕಿಯಾ ಪ್ರಜೆಗಳ ನಂತರ ಮೂರನೇ ಅತಿ ದೊಡ್ಡ ನಷ್ಟವನ್ನು ಭಾರತೀಯ ಪ್ರಜೆಗಳು ಅನುಭವಿಸಿದ್ದಾರೆ.
29 ಐರೋಪ್ಯ ದೇಶಗಳಿಗೆ ಪ್ರಯಾಣಿಸಲು ಅವಕಾಶ ನೀಡುವ ಷೆಂಗೆನ್ ವೀಸಾಕ್ಕೆ ಅರ್ಜಿ ಸಲ್ಲಿಸಲು 90 ಯುರೋಗಳು ಅಥವಾ 8,500 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕವನ್ನು ಮರಳಿಸಲಾಗುವುದಿಲ್ಲ.
2024ರಲ್ಲಿ ಭಾರತೀಯರು ಷೆಂಗೆನ್ ವೀಸಾಗಳಿಗಾಗಿ 11 ಲ.ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಪೈಕಿ 5,91,610 ಅರ್ಜಿಗಳನ್ನು ಅನುಮೋದಿಸಲಾಗಿದ್ದು,1.6 ಲ.ಕ್ಕೂ ಅಧಿಕ ಅಂದರೆ ಸುಮಾರು ಶೇ.15ರಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.
ಅತ್ಯಂತ ಹೆಚ್ಚಿನ ಅರ್ಜಿಗಳನ್ನು ಫ್ರಾನ್ಸ್ ತಿರಸ್ಕರಿಸಿದ್ದು,ಇದರಿಂದಾಗಿ ಭಾರತೀಯರು ಅನುಭವಿಸಿದ್ದ ನಷ್ಟ 25.8 ಕೋ.ರೂ. ಜಾಗತಿಕವಾಗಿ ಅತ್ಯಂತ ಹೆಚ್ಚಿನ ನಷ್ಟವನ್ನು ಅನುಭವಿಸಿದ್ದು ಅಲ್ಜೀರಿಯಾ ಪ್ರಜೆಗಳು(153 ಕೋಟಿ ರೂ.). ತುರ್ಕಿಯಾ ಪ್ರಜೆಗಳು(140.6 ಕೋಟಿ ರೂ.),ಭಾರತೀಯರು(136.6 ಕೋಟಿ ರೂ.),ಮೊರೊಕ್ಕೊ ಪ್ರಜೆಗಳು(95.7 ಕೋಟಿ ರೂ.) ಮತ್ತು ಚೀನಿಯರು(66.7 ಕೋಟಿ ರೂ.) ನಂತರದ ಸ್ಥಾನಗಳಲ್ಲಿದ್ದಾರೆ ಎಂದು ಐರೋಪ್ಯ ಆಯೋಗದ ದತ್ತಾಂಶಗಳನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ.
2023ರಲ್ಲಿ ಐರೋಪ್ಯ ಒಕ್ಕೂಟದ ದೇಶಗಳು ತಿರಸ್ಕೃತ ಅರ್ಜಿಗಳಿಂದ ಶುಲ್ಕರೂಪದಲ್ಲಿ 1,181 ಕೋಟಿ ರೂ.ಗಳನ್ನು ಗಳಿಸಿದ್ದವು,ಇದರಲ್ಲಿ ಆಫ್ರಿಕಾ ಮತ್ತು ಏಶ್ಯಾದ ದೇಶಗಳ ಪಾಲು ಶೇ.90ರಷ್ಟಿತ್ತು.
ಐರೋಪ್ಯ ಒಕ್ಕೂಟದ ದೇಶಗಳು ಮತ್ತು ಬ್ರಿಟನ್‌ನಿಂದ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ವೀಸಾ ನಿರಾಕರಣೆ ದರ ಹೆಚ್ಚಿದೆ ಎಂದು ವರದಿಯು ಹೇಳಿದೆ.