×
Ad

ಭಾರತದಲ್ಲಿ ಜನವರಿ ತಿಂಗಳಲ್ಲಿ ವೈಟ್ ಕಾಲರ್ ಉದ್ಯೋಗಗಳ ನೇಮಕಾತಿಯಲ್ಲಿ ಶೇ. 32ರಷ್ಟು ಹೆಚ್ಚಳ: ವರದಿ

Update: 2025-02-13 20:34 IST

PC - freepik

ಮುಂಬೈ: ಭಾರತದಲ್ಲಿನ ಸೆಮಿಕಂಡಕ್ಟರ್, ಇಂಧನ, ತ್ಯಾಜ್ಯ ನಿರ್ವಹಣೆ ಹಾಗೂ ತಯಾರಿಕಾ ಉದ್ಯಮಗಳಲ್ಲಿನ ನೇಮಕಾತಿಗಳಲ್ಲಿನ ಏರಿಕೆಯಿಂದಾಗಿ ಜನವರಿಯಲ್ಲಿ ವೈಟ್ ಕಾಲರ್ ಉದ್ಯೋಗ ನೇಮಕಾತಿಯಲ್ಲಿ ವಾರ್ಷಿಕ ಶೇ. 32ರಷ್ಟು ಹೆಚ್ಚಳವಾಗಿದೆ ಎಂದು ಗುರುವಾರ ವರದಿಯೊಂದು ಹೇಳಿದೆ.

found it Insights Tracker ಪ್ರಕಾರ, ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆ, 2025-26ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿನ ವ್ಯೂಹಾತ್ಮಕ ಭತ್ಯೆಯ ರೂಪುರೇಷೆ ಹಾಗೂ ಸುಸ್ಥಿರತೆ ಉಪಕ್ರಮಗಳ ಮೇಲೆ ಹೆಚ್ಚಿರುವ ಗಮನದ ಕಾರಣಕ್ಕೆ ನೇಮಕಾತಿಯಲ್ಲಿ ಈ ಪ್ರಗತಿಯಾಗಿದೆ ಎಂದು ಹೇಳಲಾಗಿದೆ.

ಜನವರಿ 2025ರಲ್ಲಿ ವಾರ್ಷಿಕ ನೇಮಕಾತಿಯ ಪ್ರಮಾಣವು ಶೇ. 32ರಷ್ಟು ಜಿಗಿತ ಕಂಡಿದ್ದು, ಇದು ಮಾರುಕಟ್ಟೆಯಲ್ಲಿ ಪುನಶ್ವೇತನಗೊಂಡಿರುವ ಆತ್ಮವಿಶ್ವಾಸವನ್ನು ಸಂಕೇತಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸ್ವಚ್ಛ ಇಂಧನ ಉಪಕ್ರಮಗಳಿಂದಾಗಿ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ, ಜನವರಿ 2025ರಲ್ಲಿನ ವಾರ್ಷಿಕ ಹಸಿರು ನೇಮಕಾತಿ ಪ್ರಮಾಣ ಶೇ. 41ರಷ್ಟು ಹೆಚ್ಚಳವಾಗಿದೆ ಎಂದು ವರದಿಯು ಬಹಿರಂಗ ಪಡಿಸಿದೆ.

ಜಾಗತಿಕ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿಗಳಿಂದ ಪ್ರೇರಿತವಾಗಿರುವ ಸೆಮಿಕಂಡಕ್ಟರ್, ಇಂಧನ ಹಾಗೂ ತ್ಯಾಜ್ಯ ನಿರ್ವಹಣೆಯಂಥ ವಲಯಗಳು ಈ ಪ್ರಗತಿಯ ಚಾಲಕ ಶಕ್ತಿಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬೆಂಗಳೂರು, ದಿಲ್ಲಿ ಹಾಗೂ ಪುಣೆ ಈ ಪಾತ್ರಗಳ ಪ್ರಮುಖ ತಾಣಗಳಾಗಿ ತಲೆ ಎತ್ತಿದ್ದು, ಇಂಧನ ಲೆಕ್ಕ ಪರಿಶೋಧನೆ ಹಾಗೂ ಸುಸ್ಥಿರತೆ ಕಾರ್ಯತಂತ್ರದಲ್ಲಿ ವಿಶೇಷ ಕೌಶಲವನ್ನು ಬಯಸುತ್ತಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.

2025ರಲ್ಲಿ ಹಸಿರು ಉದ್ಯೋಗಗಳ ಬೇಡಿಕೆ ಮತ್ತೆ ಶೇ. 11ರಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದ್ದು, ನವೀಕರಿಸಬಹುದಾದ ಇಂಧನ, ವಿದ್ಯುತ್ ಚಾಲಿತ ವಾಹನಗಳು ಹಾಗೂ ಹಸಿರು ಜಲಜನಕ ಉಪಕ್ರಮಗಳು ಈ ಹೆಚ್ಚಳಕ್ಕೆ ಕೊಡುಗೆ ನೀಡಲಿವೆ.

“ಪ್ರಮುಖ ಉದ್ಯಮಗಳಲ್ಲಿನ ಉದ್ಯೋಗ ನೇಮಕಾತಿ ಏರುಗತಿಯಲ್ಲಿರುವುದರಿಂದ, ಭಾರತದ ಉದ್ಯೋಗ ಮಾರುಕಟ್ಟೆ ಪ್ರಗತಿ ಸಾಧಿಸುವುದನ್ನು ಮುಂದುವರಿಸಿದೆ. ಪ್ರಯಾಣ, ಚಿಲ್ಲರೆ ಮಾರಾಟ ಹಾಗೂ ಹಸಿರು ಉದ್ಯೋಗಗಳು ಸುಸ್ಥಿರ ಬೆಳವಣಿಗೆಯನ್ನು ತೋರಿಸುತ್ತಿದ್ದು, ಔದ್ಯಮಿಕ ಆತ್ಮವಿಶ್ವಾಸ ಹಾಗೂ ಬೆಳೆಯುತ್ತಿರುವ ಕೈಗಾರಿಕಾ ಆದ್ಯತೆಗಳನ್ನು ಪ್ರತಿಫಲಿಸುತ್ತಿವೆ” ಎಂದು found it ಮುಖ್ಯ ಆದಾಯ ಮತ್ತು ಬೆಳವಣಿಗೆ ಅಧಿಕಾರಿ ಪ್ರಣಯ್ ಕಾಳೆ ಅಭಿಪ್ರಾಯ ಪಟ್ಟಿದ್ದಾರೆ.

ಬಜೆಟ್ ನಲ್ಲಿನ ಪ್ರಮುಖ ಪ್ರಯೋಜನಗಳು ಸೇರಿದಂತೆ ಸರಕಾರದ ನೀತಿಗಳು ಈ ಬದಲಾವಣೆಗೆ ವೇಗ ನೀಡುತ್ತಿವೆ. ವಿಶೇಷವಾಗಿ, ನವೀಕರಿಸಬಹುದಾದ ಇಂಧನ, ವಿದ್ಯುತ್ ಚಾಲಿತ ವಾಹನಗಳು ಹಾಗೂ ಸುಸ್ಥಿರತೆಯತ್ತ ಗಮನ ಕೇಂದ್ರೀಕರಿಸಿರುವ ಉದ್ಯಮಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ಮೆಟ್ರೊ ನಗರಗಳನ್ನು ಹೊರತುಪಡಿಸಿ ಉದ್ಯೋಗ ನೇಮಕಾತಿ ವಿಸ್ತರಿಸುತ್ತಿರುವುದರಿಂದ, ದ್ವಿತೀಯ ದರ್ಜೆಯ ತಾಣಗಳೂ ಪ್ರಮುಖ ಉದ್ಯೋಗ ಕೇಂದ್ರಗಳಾಗಿ ತಲೆ ಎತ್ತಿವೆ. ಆ ಮೂಲಕ ಭಾರತದ ರೂಪಾಂತರವನ್ನು ಭವಿಷ್ಯ ಸನ್ನದ್ಧ, ಹಸಿರು ಆರ್ಥಿಕತೆಯನ್ನಾಗಿ ಸದೃಢಗೊಳಿಸಿವೆ” ಎಂದು ಕಾಳೆ ಹೇಳಿದ್ದಾರೆ.

ಇದರೊಂದಿಗೆ ಪ್ರಬಲ ಗ್ರಾಹಕರ ಬೇಡಿಕೆ ಹಾಗೂ ಅನುಕೂಲಕರ ಸರಕಾರಿ ಉಪಕ್ರಮಗಳಿಂದಾಗಿ ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯಗಳಲ್ಲಿನ ಉದ್ಯೋಗ ನೇಮಕಾತಿಯಲ್ಲಿ ಜನವರಿ 2025ರಲ್ಲಿ ಶೇ. 17ರಷ್ಟು ಹೆಚ್ಚಳ ದಾಖಲಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಈ ಪ್ರವೃತ್ತಿಯು ವಿಮಾನ ಯಾನ, ಐಷಾರಾಮಿ ಹಾಗೂ ಪರಿಸರ ಪ್ರವಾಸೋದ್ಯಮ ವಲಯಗಳಲ್ಲೂ ಎದ್ದು ಕಾಣುತ್ತಿದೆ ಹಾಗೂ ಕೃತಕ ಬುದ್ಧಿಮತ್ತೆ ಹಾಗೂ ದತ್ತಾಂಶ ವಿಶ್ಲೇಷಕರನ್ನು ಅವಲಂಬಿಸಿರುವ ಪ್ರವಾಸೋದ್ಯಮ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಪಾತ್ರಗಳು ಸೃಷ್ಟಿಯಾಗಿವೆ ಎಂದು ವರದಿ ಹೇಳಿದೆ.

ಇದೇ ರೀತಿ, ಗ್ರಾಹಕರ ವೆಚ್ಚದಲ್ಲಿನ ಏರಿಕೆ ಹಾಗೂ ಡಿಜಿಟಲ್ ಪರಿವರ್ತನೆಯಿಂದಾಗಿ ಚಿಲ್ಲರೆ ಮಾರಾಟ ವಲಯದಲ್ಲೂ ಶೇ. 24ರಷ್ಟು ವಾರ್ಷಿಕ ಪ್ರಗತಿಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ವರದಿಯ ಪ್ರಕಾರ, ಇದರೊಂದಿಗೆ, ಪೂರೈಕೆ ಸರಪಳಿ ನಿರ್ವಹಣೆ, ಗ್ರಾಹಕರ ಅನುಭವ ಹಾಗೂ ಕೃತಕ ಬುದ್ಧಿಮತ್ತೆ ಚಾಲಿತ ಚಿಲ್ಲರೆ ಮಾರಾಟ ವಿಶ್ಲೇಷಕರ ಹುದ್ದೆಗಳಿಗೆ ಕುಶಲ ವೃತ್ತಿಪರರ ಬೇಡಿಕೆಯೂ ಹೆಚ್ಚಳಗೊಂಡಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News