‘ಟರ್ಬುಲೆನ್ಸ್’ಗೆ ಸಿಲುಕಿದ ಇಂಡಿಗೊ ವಿಮಾನ; ಸುರಕ್ಷಿತ ಲ್ಯಾಂಡಿಂಗ್
PC : NDTV
ಮುಂಬೈ: ಗೋವಾದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಪ್ರತಿಕೂಲ ಹವಾಮಾನದಿಂದಾಗಿ ಸೋಮವಾರ ‘ಟರ್ಬ್ಯುಲೆನ್ಸ್’ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷಬ್ದತೆ)ಗೆ ಸಿಲುಕಿತ್ತು. ಆದರೆ, ಪೈಲೆಟ್ ವಿಮಾನವನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು ಎಂದು ಇಂಡಿಗೊ ವಿಮಾನ ಯಾನ ಸಂಸ್ಥೆ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಜೂನ್ 16ರಂದು ಗೋವಾದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೊ ವಿಮಾನ 6ಇ 6811 ಪಶ್ಚಿಮ ಭಾರತದ ಮುಂಗಾರು ಹವಾಮಾನ ಪರಿಸ್ಥಿತಿಯ ಕಾರಣಕ್ಕೆ ಸ್ಪಲ್ಪ ಹೊತ್ತು ‘ಟರ್ಬುಲೆನ್ಸ್’ಗೆ ಸಿಲುಕಿತ್ತು ಎಂದು ವಿಮಾನ ಯಾನ ಸಂಸ್ಥೆ ತಿಳಿಸಿದೆ.
ಅಂತಹ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಲು ತರಬೇತು ಪಡೆದ ಪೈಲೆಟ್ ಹಾಗೂ ಸಿಬ್ಬಂದಿ ಪ್ರಯಾಣಿಕರ ಸುರಕ್ಷಿತತೆಗೆ ಖಾತರಿ ನೀಡಲು ಚಾಲ್ತಿಯಲ್ಲಿರುವ ಶಿಷ್ಟಾಚಾರಗಳನ್ನು ಅನುಸರಿಸುತ್ತಾರೆ ಎಂದು ಅದು ಹೇಳಿದೆ.
ಕಳೆದ ತಿಂಗಳು ಟಿಎಂಸಿ ಸಂಸದರ ನಿಯೋಗ ಸೇರಿದಂತೆ 227 ಪ್ರಯಾಣಿಕರನ್ನು ಹೊತ್ತು ದಿಲ್ಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ವಿಮಾನದ ಮೇಲೆ ಇದ್ದಕ್ಕಿದ್ದಂತೆ ಆಲಿಕಲ್ಲಿನ ಮಳೆ ಸುರಿಯಿತು. ಪೈಲೆಟ್ ಕೂಡಲೇ ಶ್ರೀನಗರದಲ್ಲಿರುವ ವಾಯು ನಿಯಂತ್ರಣಕ್ಕೆ ತುರ್ತು ವರದಿ ಮಾಡಿದರು.
ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು. ಆದರೆ, ವಿಮಾನದ ಮೂತಿಗೆ ಹಾನಿ ಉಂಟಾಯಿತು ಎಂದು ಇಂಡಿಗೊ ವಿಮಾನ ಯಾನ ಸಂಸ್ಥೆ ತಿಳಿಸಿದೆ.