×
Ad

ವೈದ್ಯೆಯ ಹಿಜಾಬ್ ಎಳೆದಿದ್ದ ನಿತೀಶ್ ಕುಮಾರ್ | “ಕೇವಲ ಹಿಜಾಬ್ ಮುಟ್ಟಿದ್ದಕ್ಕೆ ಇಷ್ಟೊಂದು ಗಲಾಟೆ… ಬೇರೆ ಏನಾದರೂ…” ಎಂದು ನಕ್ಕ UP ಸಚಿವ ಸಂಜಯ್ ನಿಶದ್!

Update: 2025-12-16 21:36 IST

Photo Credit : X

ಪಾಟ್ನಾ/ಲಕ್ನೋ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯುಷ್ ವೈದ್ಯೆಯೊಬ್ಬರ ಹಿಜಾಬ್ ಎಳೆದಿರುವ ಘಟನೆಯ ವೀಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಉಂಟಾದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಈ ವಿಚಾರದಲ್ಲಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡ ಉತ್ತರಪ್ರದೇಶ ಸರ್ಕಾರದ ಸಚಿವ ಸಂಜಯ್ ನಿಶದ್ ಅವರ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.

ಸೋಮವಾರ ಬಿಹಾರದ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ನೂತನವಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವ ಸಂದರ್ಭದಲ್ಲಿ, CM ನಿತೀಶ್ ಕುಮಾರ್ ವೈದ್ಯೆಯೊಬ್ಬರ ಹಿಜಾಬ್ ಎಳೆದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಆಕ್ರೋಶ್ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ಥಳೀಯ ಸುದ್ದಿ ವಾಹಿನಿಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶದ್, “ನಿತೀಶ್ ಕುಮಾರ್ ಅವರು ಹಿಜಾಬ್ ಎಳೆಯಲಿಲ್ಲ. ನೇಮಕಾತಿ ಪತ್ರವನ್ನು ಸರಿಯಾದ ವ್ಯಕ್ತಿಗೆ ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಾತ್ರ ಹಿಜಾಬ್ ತೆಗೆಯಲಾಯಿತು. ಅಷ್ಟಕ್ಕೆ ಅನಗತ್ಯ ಗದ್ದಲ ಸೃಷ್ಟಿಸಲಾಗುತ್ತಿದೆ. ಅವರು ಕೂಡ ಮನುಷ್ಯರು; ಅವರನ್ನು ಸುಮ್ಮನೆ ಗುರಿಯಾಗಿಸಬಾರದು. ಕೇವಲ ಹಿಜಾಬ್ ಮುಟ್ಟಿದ್ದಕ್ಕೆ ಇಷ್ಟೊಂದು ಗಲಾಟೆ ಆಗಿದ್ದರೆ, ಬೇರೆ ಏನಾದರೂ ಮುಟ್ಟಿದ್ದರೆ ಏನಾಗುತ್ತಿತ್ತು?” ಎಂದು ನಕ್ಕು ಉತ್ತರಿಸಿದ್ದಾರೆ.

ಈ ಹೇಳಿಕೆಯ ವೇಳೆ ಸಚಿವರು ನಕ್ಕಿರುವ ದೃಶ್ಯವೂ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಯನ್ನು ಮಹಿಳಾವಿರೋಧಿ ಮತ್ತು ಅಸಭ್ಯ ಎಂದು ವಿರೋಧ ಪಕ್ಷಗಳು ಹಾಗೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಕಾಂಗ್ರೆಸ್ ಪಕ್ಷದ ವಕ್ತಾರೆ ಸುಪ್ರಿಯಾ ಶ್ರಿನೇತ್ ಅವರು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿ, “ಹಿಜಾಬ್ ತೆಗೆದಿದ್ದಕ್ಕೆ ಇಷ್ಟೊಂದು ಗಲಾಟೆ ಎಂದರೆ, ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎನ್ನುವ ಹೇಳಿಕೆಯನ್ನು ಯುಪಿ ಸರ್ಕಾರದ ಸಚಿವರು ನಗುತ್ತಾ ಹೇಳಿದ್ದಾರೆ. ಇದು ಅವರ ಸ್ತ್ರೀದ್ವೇಷಿ ಮತ್ತು ನೀಚ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News