ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ನೆಹರೂ ಎಸಗಿದ ಪ್ರಮಾದಗಳಲ್ಲೊಂದು: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಆರೋಪ
ಹಿಮಂತ ಬಿಸ್ವ ಶರ್ಮ | PC : PTI
ಗುವಾಹಟಿ: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಮಾಡಿದ ಅತ್ಯಂತ ದೊಡ್ಡ ವ್ಯೂಹಾತ್ಮಕ ಪ್ರಮಾದ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಆರೋಪಿಸಿದ್ದಾರೆ. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ, ಭಾರತ ಇನ್ನು ಮುಂದೆ ಭಯೋತ್ಪಾದನೆ ಮತ್ತು ಹಗೆತನಕ್ಕೆ ತುಷ್ಟೀಕರಣದ ಬಹುಮಾನ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ದೇಶದ ಪ್ರಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಅಂತಾರಾಷ್ಟ್ರೀಯ ಮನ್ನಣೆ ಪಡೆಯುವ ದಾರಿ ತಪ್ಪಿದ ತುಡಿತದಿಂದಾಗಿ ಭಾರತದ ದೀರ್ಘಕಾಲೀನ ರಾಷ್ಟ್ರೀಯ ಹಿತಾಸಕ್ತಿ ಬೆಲೆ ತೆರುವಂತಾಯಿತು ಎಂದೂ ಅವರು ಆರೋಪಿಸಿದ್ದಾರೆ.
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಡುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಅವರು ಈ ವೇಳೆ ಶ್ಲಾಘಿಸಿದ್ದಾರೆ.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವು ಮಂದಿ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಭಾರತ ಕೈಗೊಂಡಿತ್ತು. ಈ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಬಹುತೇಕರು ಪ್ರವಾಸಿಗರಾಗಿದ್ದರು.