ಅಂದು ಗುಜರಾತಿಗೆ ಅಗ್ರಸ್ಥಾನಿಯಾಗಿದ್ದ ವಿದ್ಯಾರ್ಥಿನಿ ಈಗ ಐಎನ್‌ಐಸಿಇಟಿ ಪಿಜಿಯಲ್ಲಿ ರಾಷ್ಟ್ರಕ್ಕೇ 39ನೇ ಸ್ಥಾನ
ಇಜ್ಮಾಬಾನು ಸೈಯದ್ | PC : timesofindia.indiatimes.com
ವಡೋದರಾ: ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಬೋರ್ಡ್ ಪರೀಕ್ಷೆಗಳಲ್ಲಿ ಗುಜರಾತ್ ಗೆ ಅಗ್ರಸ್ಥಾನಿಯಾಗಿದ್ದ ಇಜ್ಮಾಬಾನು ಸೈಯದ್(23) ಅವರು ಈಗ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಏಮ್ಸ್ ನಡೆಸಿದ್ದ ಅಖಿಲ ಭಾರತ ಮಟ್ಟದ ಪ್ರತಿಷ್ಠಿತ ಐಎನ್‌ಐಸಿಇಟಿ ಪರೀಕ್ಷೆಯಲ್ಲಿ 39ನೇ ರ‍್ಯಾಂಕ್ ಪಡೆಯುವ ಮೂಲಕ ಸಣ್ಣ ತರಗತಿಯಿಂದ ದೇಶದ ಉನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ದ್ವಾರಗಳವರೆಗೆ ತನ್ನ ಅದ್ಭುತ ಪಯಣವನ್ನು ಮುಂದುವರಿಸಿದ್ದಾರೆ.
ಇಜ್ಮಾಬಾನು ವಡೋದರಾದ ಅಲ್ಪಸಂಖ್ಯಾತರ ಪ್ರಾಬಲ್ಯದ ಯಾಕುತ್ ಪುರ ಪ್ರದೇಶದ ಎಂಇಎಸ್ ಬಾಲಕರ ಪ್ರೌಢಶಾಲೆಯಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಶಿಕ್ಷಕರಾಗಿರುವ ಆಬಿದ್ ಸೈಯದ್ ಅವರ ಪುತ್ರಿಯಾಗಿದ್ದಾರೆ. 1998ರಿಂದಲೂ ಬೋಧನಾ ವೃತ್ತಿಯಲ್ಲಿರುವ ಸೈಯದ್ ಈ ಪ್ರದೇಶದಲ್ಲಿಯ ಮುಸ್ಲಿಮ್ ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಶಿಕ್ಷಣವನ್ನು ಉತ್ತೇಜಿಸುತ್ತಿದ್ದಾರೆ.
ಇಜ್ಮಾಬಾನು ಇತ್ತೀಚಿಗೆ ಬರೋಡಾ ಮೆಡಿಕಲ್ ಕಾಲೇಜಿನಿಂದ ಡಿಸ್ಟಿಂಕ್ಷನ್‌ನೊಂದಿಗೆ ಎಂಬಿಬಿಎಸ್ ಪದವಿಯನ್ನು ಗಳಿಸಿದ್ದಾರೆ. ತನ್ನ ಶೈಕ್ಷಣಿಕ ಪಯಣದಲ್ಲಿ ಅವರು ನಿರಂತರವಾಗಿ ಅತ್ಯುತ್ತಮ ಸಾಧನೆಗಳನ್ನು ಮಾಡುತ್ತಲೇ ಬಂದಿದ್ದಾರೆ. 2017ರಲ್ಲಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶೇ.99.99 ಅಂಕಗಳನ್ನು ಗಳಿಸುವ ಮೂಲಕ ಗುಜರಾತಿಗೆ ಅಗ್ರ ಸ್ಥಾನಿಯಾಗಿದ್ದ ಅವರು ಎರಡು ವರ್ಷಗಳ ಬಳಿಕ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಅದೇ ಸಾಧನೆಯನ್ನು ಪುನರಾವರ್ತಿಸಿದ್ದರು.
‘ನಾನು ಸರ್ಜನ್ ಆಗಲು ಬಯಸಿದ್ದೇನೆ. ಪ್ರತಿಷ್ಠಿತ ಕೇಂದ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವುದು ನನ್ನ ಗುರಿಯಾಗಿದೆ ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಇಜ್ಮಾಬಾನು ಹೇಳಿದರು.
ಸಾಂಪ್ರದಾಯಿಕವಾಗಿ ಶಿಕ್ಷಕ ವೃತ್ತಿಯ ಪ್ರಾಬಲ್ಯವನ್ನು ಹೊಂದಿದ್ದ ಸೈಯದ್ ಕುಟುಂಬವು ಈಗ ವೈದ್ಯಕೀಯದತ್ತ ಹೊರಳುತ್ತಿದೆ.
‘ಗುಜರಾತಿ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಬಿಎ ಮತ್ತು ಬಿಎಡ್ ಪದವಿಗಳನ್ನು ಪಡೆದಿದ್ದ ನನ್ನ ತಾಯಿ ಇತ್ತೀಚಿನವರೆಗೂ ಶಿಕ್ಷಕಿಯಾಗಿದ್ದರು. ಈಗ ನಾನು ಎಂಬಿಬಿಎಸ್ ಪೂರ್ಣಗೊಳಿಸಿದ್ದೇನೆ ಮತ್ತು ನನ್ನ ಕಿರಿಯ ಸೋದರ ಜಿಎಂಇಆರ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ’ ಎಂದು ಇಜ್ಮಾಬಾನು ತಿಳಿಸಿದರು.