ಐಎನ್‌ಎಲ್‌ಡಿ ಹರ್ಯಾಣ ವರಿಷ್ಠನ ಹತ್ಯೆ ಪ್ರಕರಣ |ಮಾಜಿ ಶಾಸಕ ಕೌಶಿಕ್, ಇತರರ ವಿರುದ್ಧ ಪ್ರಕರಣ ದಾಖಲು
ನಫೆ ಸಿಂಗ್ ರಾಠಿ | Photo: newindianexpress.com
ಚಂಡಿಗಢ: ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‌ಎಲ್‌ಡಿ)ದ ಹರ್ಯಾಣ ಘಟಕದ ಅಧ್ಯಕ್ಷ ನಫೆ ಸಿಂಗ್ ರಾಠಿ (66) ಹಾಗೂ ಇನ್ನೊಬ್ಬರ ಹತ್ಯೆ ಪ್ರಕರಣದಲ್ಲಿ ಬಹಾದ್ದೂರಡದ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ನರೇಶ್ ಕೌಶಿಕ್ ಹಾಗೂ ಇತರರ ವಿರುದ್ಧ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿ ಬಹಾದ್ದೂರ್ಗಡ ಪೊಲೀಸ್ ಠಾಣೆಯಲ್ಲಿ ಹರ್ಯಾಣ ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದಾಖಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ನರೇಶ್ ಕೌಶಿಕ್, ರಮೇಶ್ ರಾಠಿ, ಸತೀಶ್ ರಾಠಿ ಹಾಗೂ ರಾಹುಲ್ ಅವರ ಹೆಸರು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡು ಬಾರಿ ಶಾಸಕರಾಗಿದ್ದ ನಫೆ ಸಿಂಗ್ ರಾಠಿ ಅವರು ಫೆಬ್ರವರಿ 25ರಂದು ತನ್ನ ಎಸ್ಯುವಿ ವಾಹನದ ಮುಂದಿನ ಆಸನದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದರು. ಬರಾಹಿ ಲೆವೆಲ್ ಕ್ರಾಸಿಂಗ್ ಸಮೀಪ ಹಗಲಿನಲ್ಲೇ ದುಷ್ಕರ್ಮಿಗಳು ಅವರ ಮೇಲೆ ತೀರಾ ಸಮೀಪದಿಂದ ಗುಂಡು ಹಾರಿಸಿದ್ದರು. ಬಳಿಕ ಪರಾರಿಯಾಗಿದ್ದರು. ಇದರಿಂದ ರಾಠಿ ಅವರಲ್ಲದೆ, ಅವರ ಸಹವರ್ತಿಗಳಾದ ಮಂದೋಥಿ ಗ್ರಾಮದ ಜೈಕಿಶನ್ ಮೃತಪಟ್ಟಿದ್ದರು. ಇಬ್ಬರು ಖಾಸಗಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.